ಹಳೆಯ ಒಡಂಬಡಿಕೆKNCL
1ಅರಸನಾದ ಡೇರಿಯಸನ ಆಳ್ವಿಕೆಯ ನಾಲ್ಕನೆಯ ವರ್ಷದ ಒಂಭತ್ತನೆಯ ತಿಂಗಳ (ಅಂದರೆ ಕಿಸ್ಲೇವ್ ತಿಂಗಳಿನ) ನಾಲ್ಕನೆಯ ದಿನದಲ್ಲಿ [1] ಸರ್ವೇಶ್ವರ ಜೆಕರ್ಯನಿಗೆ ಒಂದು ಸಂದೇಶವನ್ನು ಅನುಗ್ರಹಿಸಿದರು.
2ಅಷ್ಟರಲ್ಲಿ ಬೇತೇಲಿನ ಜನರು ಸರೆಚರನನ್ನು ರೆಗೆಮ್ ಮೆಲೆಕ್ನನ್ನು ಹಾಗೂ ಅವನ ಪರಿಜನರನ್ನು ಸರ್ವೇಶ್ವರಸ್ವಾಮಿಯ ಆಶೀರ್ವಾದವನ್ನು ಕೋರಲು ದೇವಾಲಯಕ್ಕೆ ಕಳುಹಿಸಿದ್ದರು.
3ಅಲ್ಲದೆ, ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ದೇವಾಲಯದ ಯಾಜಕರನ್ನೂ ಪ್ರವಾದಿಗಳನ್ನೂ ಕಂಡು, “ನಾವು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬಂದಂತೆ, 5ನೆಯ ತಿಂಗಳಲ್ಲಿ ಉಪವಾಸವಿದ್ದು ಪ್ರಲಾಪಿಸಬೇಕೋ?” ಎಂದು ವಿಚಾರಿಸಿಕೊಂಡು ಬರಬೇಕೆಂದು ಅವರಿಗೆ ಆಜ್ಞಾಪಿಸಿದರು.
4ಇಂತಿರಲು, ಸೇನಾಧೀಶ್ವರ ಸರ್ವೇಶ್ವರ ನನಗೆ ಈ ಸಂದೇಶವನ್ನು ದಯಪಾಲಿಸಿದರು”
5“ಯಾಜಕರಿಗೂ ನಾಡಿನ ಸಕಲ ಜನರಿಗೂ ಹೀಗೆಂದು ತಿಳಿಸಲು: ನೀವು ಕಳೆದ ಎಪ್ಪತ್ತು ವರ್ಷಗಳಿಂದ 5ನೇ ಮತ್ತು 7ನೇ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡಿದ್ದು ನನಗೋಸ್ಕರವೋ?
6ನೀವು ಭೋಜನ ಮಾಡಿದ್ದು, ಪಾನಮಾಡಿದ್ದು ನಿಮ್ಮ ತೃಪ್ತಿಗಾಗಿಯೇ ಅಲ್ಲವೆ?”
7“ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳು ಜನಭರಿತವಾಗಿ ನೆಮ್ಮದಿಯಿಂದಿದ್ದಾಗ ಹಾಗೂ ದಕ್ಷಿಣ ಪ್ರಾಂತ್ಯದಲ್ಲೂ ಬಯಲು ಪ್ರದೇಶದಲ್ಲೂ ಪ್ರಜೆಯು ತುಂಬಿದ್ದಾಗ ಪ್ರವಾದಿಗಳ ಮುಖಾಂತರ ಪ್ರಕಟಿಸಿದ ಸಂದೇಶ ಇದೇ ಅಲ್ಲವೆ?”
8ಅಲ್ಲದೆ ಸರ್ವೇಶ್ವರ ಜೆಕರ್ಯನಿಗೆ ಕೊಟ್ಟ ಸಂದೇಶ ಏನೆಂದರೆ:
9:ಸತ್ಯಾನುಸಾರ ನ್ಯಾಯತೀರಿಸಿರಿ.
10ಒಬ್ಬರಿಗೊಬ್ಬರು ಪ್ರೀತಿ ಕರುಣೆಯನ್ನು ತೋರಿಸಿರಿ. ವಿಧವೆಯರು, ಅನಾಥರು, ವಿದೇಶಿಯರು, ಬಡವರು, ಇವರಾರನ್ನೂ ಶೋಷಣೆಮಾಡಬೇಡಿ. ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.
11“ನಿಮ್ಮ ಪೂರ್ವಜರು ಕಿವಿಗೊಡದೆಹೋದರು: ಹಟಮಾರಿಗಳಾದರು; ಮಂದಮತಿಗಳಾದರು; ಅವರ ಹೃದಯ ಗೋರ್ಕಲ್ಲಿನಂತೆ ಆಯಿತು.
12ಧರ್ಮಶಾಸ್ತ್ರವನ್ನಾಗಲೀ ಪೂರ್ವಕಾಲದ ಪ್ರವಾದಿಗಳ ಮುಖಾಂತರ, ಸೇನಾಧಿಶ್ವರ ಸರ್ವೇಶ್ವರ ಆದ ನಾನು ತಿಳಿಸಿದ ನನ್ನಾತ್ಮಪ್ರೇರಿತ ಮಾತುಗಳನ್ನಾಗಲೀ ಕೇಳದೆಹೋದರು. ಹೀಗೆ ನನ್ನ ಕಡುಕೋಪಕ್ಕೆ ಗುರಿಯಾದರು.
13ಆಗ ಹೀಗೆಂದೆ: ‘ನಾನು ಕೂಗಿದಾಗ ಅವರು ಕೇಳದೆಹೋದರು; ಅವರು ಕೂಗಿದಾಗ ನಾನು ಕೇಳಲಿಲ್ಲ.’
14ಬಿರುಗಾಳಿಯಂತೆ ಅವರನ್ನು ಅಪರಿಚಿತ ಜನಾಂಗಗಳ ಮಧ್ಯೆ ತೂರಿ ಚದರಿಬಿಟ್ಟೆ; ಹಾಗೆ ಅವರು ಚದರಿಹೋದ ಮೇಲೆ ನಾಡು ಹಾಳಾಯಿತು. ಅಲ್ಲಿ ಯಾರೂ ಉಳಿಯದಂತಾಯಿತು. ಅವರ ನಿಮಿತ್ತ ಚೆಲುವ ನಾಡು ನಿರ್ಜನ ಪ್ರದೇಶವಾಯಿತು.”