ಹಳೆಯ ಒಡಂಬಡಿಕೆKNCL
1ಸೇನಾಧೀಶ್ವರ ಸರ್ವೇಶ್ವರ ಹೀಗೆ ಹೇಳುತ್ತಾರೆ: “ಆ ದಿನದಂದು ದಾವೀದ ವಂಶದವರಿಗೆ ಮತ್ತು ಜೆರುಸಲೇಮಿನವರಿಗೆ ಪಾಪದ ಅಶುದ್ಧತೆಯನ್ನು ಪರಿಹರಿಸಬಲ್ಲ ಒಂದು ಬುಗ್ಗೆ ಕಾಣಿಸಿಕೊಳ್ಳುವುದು.
2ಅಂದು ನಾಡಿನಲ್ಲಿ ವಿಗ್ರಹಗಳು ಹೆಸರಿಲ್ಲದಂತೆ ಮಾಡುವೆನು; ಅಷ್ಟೇ ಅಲ್ಲ, ಅವುಗಳನ್ನು ಯಾರೂ ನೆನಸಿಕೊಳ್ಳದಂತೆ ಮಾಡುವೆನು; ಅಲ್ಲದೆ ಪ್ರವಾದಿಯೆನಿಸಿಕೊಳ್ಳುವವರನ್ನೂ ಅಶುದ್ಧ ಆತ್ಮವನ್ನೂ ನಾಡಿನಿಂದ ತೊಲಗಿಸಿಬಿಡುವೆನು.
3ಯಾವನಾದರೂ ಪ್ರವಾದನೆ ಮಾಡಲು ಯತ್ನಿಸಿದರೆ, ಅವನ ತಾಯಿತಂದೆಗಳೇ, “ಇವನು ಸರ್ವೇಶ್ವರಸ್ವಾಮಿಯ ಹೆಸರೆತ್ತಿ ಸುಳ್ಳಾಡುವುದರಿಂದ ಅವನು ಬದುಕಬಾರದು,” ಎಂದು ಹೇಳುವರು. ಅಷ್ಟೇ ಅಲ್ಲ, ಅವನು ಮಾಡಿದ ಪ್ರವಾದನೆಯ ನಿಮಿತ್ತ ಅವರೇ ಅವನನ್ನು ತಿವಿದು ಕೊಂದುಹಾಕುವರು.
4ಆ ದಿನದಲ್ಲಿ ಯಾವ ಪ್ರವಾದಿಯೂ ತನಗಾಗಿರಬಹುದಾದ ದರ್ಶನಗಳನ್ನು ಪ್ರಕಟಿಸಲು ಹೆಮ್ಮೆಪಡುವುದಿಲ್ಲ. ಪ್ರವಾದಿಯಂತೆ ನಟಿಸುವುದಿಲ್ಲ. ಪ್ರವಾದಿಯ ವೇಷವನ್ನು ಧರಿಸುವುದಿಲ್ಲ.
5ಬದಲಿಗೆ, ತಾನು ಪ್ರವಾದಿಯಲ್ಲ, ಹೊಲದಲ್ಲಿ ಕೆಲಸಮಾಡುವವನು, ಚಿಕ್ಕಂದಿನಿಂದ ನಾನು ಕೂಲಿಯಾಳು ಎಂದುಕೊಳ್ಳುವನು.
6‘ನಿನ್ನ ಮೈಮೇಲಿನ ಗಾಯಗಳು ಹೇಗಾದವು?’ ಎಂದು ಯಾರಾದರೂ ಕೇಳಿದರೆ, ‘ಇವು ಗೆಳೆಯನ ಮನೆಯಲ್ಲಾದ ಗಾಯಗಳು’ ಎಂದು ಉತ್ತರಕೊಡುವನು.”
7ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಕುರಿಗಾಹಿಗೆ ವಿರುದ್ಧವಾಗಿ, ನನ್ನಾಸಂಗಡಿಗನಿಗೆದುರಾಗಿ, ಓ ಖಡ್ಗವೇ, ಎಚ್ಚರಗೊಳ್ಳು; ಕೊಲ್ಲು ಕುರಿಗಾಹಿಯನು. ಆಗ ಚದರುವುವು ಕುರಿಗಳು, ಕೈಮಾಡಲಿರುವೆ ಮರಿಗಳ ಮೇಲೂ.
8ಹತರಾಗುವರು ನಾಡಿನ ಮೂರರಲ್ಲೆರಡು ಭಾಗದವರು, ಮೂರನೆಯ ಭಾಗದವರು ಉಳಿಯುವರಲ್ಲಿ, ಸರ್ವೇಶ್ವರಸ್ವಾಮಿಯ ನುಡಿಯಿದು.
9ಹಾಕುವೆನಾ ಮೂರನೇ ಭಾಗದವರನ್ನು ಬೆಂಕಿಗೆ, ಶೋಧಿಸುವೆನು ಅವರನ್ನು ಬೆಳ್ಳಿಯ ಹಾಗೆ. ಶುದ್ಧೀಕರಿಸುವೆನು ಬಂಗಾರದ ಹಾಗೆ. ಕಿವಿಗೊಡುವೆ ನನ್ನ ಹೆಸರೆತ್ತಿ ಪ್ರಾರ್ಥಿಸುವವರಿಗೆ. ಹೇಳುವೆನು, ‘ಇವರೇ ನನ್ನ ಪ್ರಜೆಯೆಂದು. ಹೇಳುವರವರು ‘ಸರ್ವೇಶ್ವರನೇ ನಮ್ಮ ದೇವ’ ಎಂದು.