ಹಳೆಯ ಒಡಂಬಡಿಕೆKNCL

ಪ್ರವಾದಿ ಜೆಕರ್ಯನ ಗ್ರಂಥ 11

1ತೆರೆ, ಲೆಬನೋನೇ ನಿನ್ನ ಪುರದ್ವಾರಗಳನು ದಹಿಸಿಬಿಡಲಿ ಅಗ್ನಿ ನಿನ್ನ ದೇವದಾರುಗಳನು!

2ತುರಾಯಿಮರವೇ, ಗೋಳಾಡು ಬಿದ್ದುಹೋಗಿದೆ ದೇವದಾರು ನಾಶವಾಗಿವೆ ಭಾರೀ ಮರಗಳು. ರೋಧಿಸಲಿ ಬಾಷಾನಿನ ಅಲ್ಲೋನ್ ವೃಕ್ಷಗಳು ಉರುಳಿವೆ ನುಗ್ಗಲಾಗದಾ ದಟ್ಟವನಗಳು.

3ಆಹಾ! ಕೇಳಿಬರುತ್ತಿದೆ ಕುರುಬರ ಗೋಳಾಟ ಬರಡಾಗಿದೆ ಅವರ ಹುಲ್ಲುಗಾವಲ ನೋಟ ಕೇಳಿರಿ, ಇಗೋ, ಯುವಸಿಂಹಗಳ ಆಕ್ರಂದನ ಏಕೆನೆ ಪಾಳುಬಿದ್ದಿದೆ ಜೋರ್ಡನಿನ ದಟ್ಟವನ!

4ದೇವರಾದ ಸರ್ವೇಶ್ವರ ನನಗೆ ಇಂತೆಂದರು: “ಕೊಯ್ಗುರಿಗಳ ಮಂದೆಯನು ಕಾಯಿ.

5ಕೊಂಡುಕೊಳ್ಳುವವರು, ಅವುಗಳನ್ನು ಕೊಯ್ದರೂ ನಿರಪರಾಧಿಗಳೆನಿಸಿಕೊಳ್ಳುವರು. ಅವುಗಳನ್ನು ಮಾರುವವರು ‘ಸರ್ವೇಶ್ವರಸ್ವಾಮಿಗೆ ಸ್ತೋತ್ರ, ನಾವು ಧನವಂತರಾದೆವು’ ಎಂದುಕೊಳ್ಳುವರು. ಆ ಮಂದೆಯ ಕುರುಬರು ಸಹ ಅವುಗಳಿಗೆ ಕರುಣೆತೋರಿಸರು.”

6ಸರ್ವೇಶ್ವರಸ್ವಾಮಿಯ ನುಡಿಯಿದು: “ಈ ಲೋಕನಿವಾಸಿಗಳಿಗೆ ನಾನು ಕರುಣೆತೋರಿಸೆನು. ಪ್ರತಿಯೊಬ್ಬನನ್ನು ತನ್ನ ತನ್ನ ನೆರೆಯವನ ಕೈಗೂ ಅರಸನ ಕೈಗೂ ಒಪ್ಪಿಸಿಬಿಡುವೆನು. ಆ ಬಲಿಷ್ಠರು ಲೋಕವನ್ನು ಧ್ವಂಸಮಾಡುವರು. ಅವರ ಕೈಗೆ ಸಿಕ್ಕದವರನ್ನು ನಾನು ರಕ್ಷಿಸೆನು.”

7ಆಗ ನಾನು ಕೊಯ್ಗುರಿಗಳನ್ನು ವ್ಯಾಪಾರ ಮಾಡುವವರಿಗೋಸ್ಕರ ಆ ಮಂದೆಗೆ ಕುರಿಗಾಹಿ ಆದೆ. ಎರಡು ಕುರಿಗೋಲುಗಳನ್ನು ಕೈಗೆ ತೆಗೆದುಕೊಂಡು ಒಂದಕ್ಕೆ ‘ಕೃಪೆ’ ಎಂದೂ ಮತ್ತೊಂದಕ್ಕೆ ‘ಐಕ್ಯ’ ಎಂದೂ ಹೆಸರಿಟ್ಟು ಆ ಮಂದೆಯನ್ನು ಮೇಯಿಸಿದೆ.

8ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಕೆಲಸದಿಂದ ತೆಗೆದುಹಾಕಿದೆ. ಅನಂತರ ನನಗೆ ಕುರಿಗಳ ಬಗ್ಗೆ ಅಸಹ್ಯವಾಯಿತು. ಕುರಿಗಳು ಸಹ ನನ್ನ ಬಗ್ಗೆ ಬೇಸರಗೊಂಡವು.

9ಆಗ ನಾನು: “ಇನ್ನು ಮೇಲೆ ನಾನು ನಿಮ್ಮನ್ನು ಮೇಯಿಸೆನು. ಸಾಯಬೇಕಾದವು ಸಾಯಲಿ, ಹಾಳಾಗಬೇಕಾದವು ಹಾಳಾಗಿಹೋಗಲಿ, ಉಳಿದವುಗಳು ಒಂದನ್ನೊಂದು ಕಚ್ಚಿ ಕಬಳಿಸಿಬಿಡಲಿ,” ಎಂದೆ.

10ಬಳಿಕ ಎಲ್ಲ ರಾಷ್ಟ್ರಗಳೊಂದಿಗೆ ನಾನು ಮಾಡಿಕೊಂಡಿದ್ದ ಒಡಂಬಡಿಕೆಯನ್ನು ರದ್ದುಗೊಳಿಸಬೇಕೆಂದು ‘ಕೃಪೆ’ ಎಂಬ ಕೋಲನ್ನು ಮುರಿದುಬಿಟ್ಟೆ.

11ಅಂದೇ ಆ ಒಡಂಬಡಿಕೆ ರದ್ದಾಯಿತು. ಇದನ್ನು ವೀಕ್ಷಿಸುತ್ತಿದ್ದ ಕೊಯ್ಗುರಿಗಳ ವ್ಯಾಪಾರಿಗಳು, ನಾನು ಈಡೇರಿಸಿದ್ದು ದೇವರ ನುಡಿಯನ್ನೇ ಎಂಬುದಾಗಿ ಗ್ರಹಿಸಿಕೊಂಡರು.

12ಅನಂತರ ನಾನು ಅವರಿಗೆ, “ನಿಮಗೆ ಸರಿದೋರಿದರೆ ನನಗೆ ಸಂಬಳವನ್ನು ಕೊಡಿ; ಇಲ್ಲವಾದರೆ ಬಿಡಿ,” ಎಂದೆ. ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ಮೂವತ್ತು ಬೆಳ್ಳಿನಾಣ್ಯವನ್ನು ನನಗೆ ಸಂಬಳಕ್ಕಾಗಿ ಕೊಟ್ಟರು.

13ಇದನ್ನು ನೋಡಿದ ಸರ್ವೇಶ್ವರ ನನಗೆ: “ಇದನ್ನು ಕಾಣಿಕೆ ಕೋಶದಲ್ಲಿ ಬಿಸಾಡು. ಇದು ತಾನೋ ಅವರು ನನಗೆ ಕೊಡುವಂಥ ಘನವಾದ ಸಂಬಳ!” ಎಂದರು. ಅಂತೆಯೇ ನಾನು ಆ ಮೂವತ್ತು ಬೆಳ್ಳಿನಾಣ್ಯಗಳನ್ನು ತೆಗೆದುಕೊಂಡು ಸರ್ವೇಶ್ವರನ ಆಲಯದ ಕಾಣಿಕೆ ಕೋಶದಲ್ಲಿ ಬಿಸಾಡಿಬಿಟ್ಟೆ.

14ಕೂಡಲೆ ಜುದೇಯ ಮತ್ತು ಇಸ್ರಯೇಲ್ ನಡುವೆ ಇದ್ದ ಸೋದರ ಸಂಬಂಧವನ್ನು ಮುರಿಯಬೇಕೆಂದು ‘ಐಕ್ಯ’ವೆಂಬ ನನ್ನ ಎರಡನೇ ಕೋಲನ್ನು ಮುರಿದುಬಿಟ್ಟೆ.

15ಅನಂತರ ಸರ್ವೇಶ್ವರ ನನಗೆ ಹೀಗೆಂದು ಅಪ್ಪಣೆಮಾಡಿದರು: “ಮತ್ತೊಮ್ಮೆ ನೀನು ವೇಷ ಧರಿಸಿಕೊಂಡು ಮಂಕು ಕುರುಬನಂತೆ ನಟಿಸು.

16ಏಕೆಂದರೆ ನಾಡಿನಲ್ಲಿ ಒಬ್ಬ ಕುರುಬನು ಏಳುವಂತೆ ನಾನು ಮಾಡುವೆನು. ಅವನು ಅಳಿದುಹೋದ ಕುರಿಗಳನ್ನು ಗುಣಪಡಿಸನು; ಚದರಿಹೋದ ಕುರಿಗಳನ್ನು ಹುಡುಕಿತರನು; ಉಳಿದವುಗಳನ್ನು ಸಾಕಲಾರನು. ಕೊಬ್ಬಿದ ಕುರಿಗಳನ್ನು ಕಡಿದು, ಅವುಗಳ ಗೊರಸುಗಳನ್ನೂ ಸುಲಿದು ಕಬಳಿಸುವನು.

17ಮಂದೆಕಾಯದ ಕುರುಬನಿಗೆ ಧಿಕ್ಕಾರ! ತಾಕುವುದು ಅವನ ತೋಳಿಗೂ ಬಲಗಣ್ಣಿಗೂ ಖಡ್ಗ ತೀರಾ ಬತ್ತಿಹೋಗಲಿ ಅವನ ತೋಳು ಪೂರಾ ಮಬ್ಬಾಗಲಿ ಅವನ ಬಲಗಣ್ಣು.