ಹಳೆಯ ಒಡಂಬಡಿಕೆKNCL

ಪ್ರವಾದಿ ಜೆಕರ್ಯನ ಗ್ರಂಥ 10

1ವಸಂತಕಾಲದಲ್ಲಿ ಮಳೆಗಾಗಿ ಸರ್ವೇಶ್ವರಸ್ವಾಮಿಗೆ ಪ್ರಾರ್ಥನೆ ಮಾಡಿರಿ. ಮೋಡ ಮಿಂಚುಗಳನ್ನು ಗಾಳಿಮಳೆಯನ್ನು ಉಂಟುಮಾಡುವವರು ಅವರೇ. ಸರ್ವರಿಗೂ ಹೊಲಗದ್ದೆಗಳಲ್ಲಿ ಪೈರುಪಚ್ಚೆಗಳನ್ನು ನೀಡುವವರು ಅವರೇ.

2ಗೃಹದೇವತೆಗಳು ನುಡಿಯುವುದು ಜೊಳ್ಳು; ಶಕುನ ಹೇಳುವವರ ಮಾತು ಸುಳ್ಳು. ಸ್ವಪ್ನಕಾರರ ಕನಸುಗಳು ಕಲ್ಪಿತ, ಅವರು ಹೇಳುವ ಸಮಾಧಾನ ವ್ಯರ್ಥ, ಈ ಕಾರಣ ಜನರು ಕುರಿಗಳಂತೆ ಚದರಿದ್ದಾರೆ; ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.

3ಸರ್ವೇಶ್ವರ ಹೀಗೆನ್ನುತ್ತಾರೆ: “ಎಂತಲೇ ಕುರಿಗಾಹಿಗಳ ಮೇಲೆ ನನ್ನ ಕೋಪ ಭುಗಿಲೆದ್ದಿದೆ. ಆ ಮುಂದಾಳುಗಳ ಮೇಲೆ ನನ್ನ ದಂಡನೆ ಎರಗಲಿದೆ. ಸೇನಾಧೀಶ್ವರ ಸರ್ವೇಶ್ವರನಾದ ನಾನು ಜುದೇಯ ಕುಲವನ್ನು ನನ್ನ ಮಂದೆಯಂತೆ ಪರಿಪಾಲಿಸುವೆನು. ಅದನ್ನು ವೀರ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವೆನು.

4ಆ ಕುಲದಿಂದಲೇ ಮೂಲೆಗಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲುಗಳು ಬರುವುವು. ಆ ಕುಲದಿಂದಲೇ ಸಕಲ ಅಧಿಕಾರಿಗಳು ಹೊರಬರುವರು.

5ಇವರೆಲ್ಲರು ರಣವೀರರಂತೆ ಶತ್ರುಗಳನ್ನು ಬೀದಿಕೆಸರಿನಲ್ಲಿ ತುಳಿದುಬಿಡುವರು. ಸರ್ವೇಶ್ವರ ತಮ್ಮ ಸಂಗಡ ಇದ್ದಾರೆಂದು ಧೈರ್ಯದಿಂದ ಯುದ್ಧಮಾಡುವರು, ಎದುರಿಸುವ ಕುದುರೆ ಸವಾರರನ್ನು ಭ್ರಾಂತಿಗೊಳಿಸುವರು.”

6“ಬಲಗೊಳಿಸುವೆನು ಯೆಹೂದ್ಯ ಕುಲವನು ಉದ್ಧರಿಸುವೆನು ಜೊಸೇಫನ ವಂಶವನು. ಕನಿಕರಿಸುವೆನು, ಮರಳಿ ಬರಮಾಡುವೆನು ಅವರನು ನಾನು ಕೈಬಿಟ್ಟವರಂತೆ ಇರಲಾರರವರು ಇನ್ನು. ಏಕೆನೆ ನಾನೇ ದೇವ ಸರ್ವೇಶ್ವರ ಅವರಿಗೆ ಕಿವಿಗೊಡುವೆನು ನಾನು ಅವರ ಕರೆಗೆ ಸದುತ್ತರವೀಯುವೆನು ಅವರ ಮೊರೆಗೆ.

7ಬಲಾಢ್ಯ ವೀರರಾಗುವರು ಎಫ್ರಯಿಮ್ ಕುಲದವರು ದ್ರಾಕ್ಷಾರಸ ಕುಡಿದವರಂತೆ ಮನದಲ್ಲಿ ಸುಖಿಸುವರು. ಇದಕಂಡು ಸಂತೋಷಿಸುವರು ಅವರ ಕುವರಕುವರಿಯರು ಸರ್ವೇಶ್ವರಸ್ವಾಮಿಯಲಿ ಹೃತ್ಪೂರ್ವಕವಾಗಿ ಆನಂದಗೊಳ್ಳುವರು.

8“ಸಭೆ ಸೇರಿಸುವೆನವರನು ನಿಸ್ಸಂದೇಹವಾಗಿ ವಿಮುಕ್ತಗೊಳಿಸುವೆನವರನು ಕರೆದು ಸನ್ನೆಮಾಡಿ ಹಿಂದಿನಂತೆ ಮುಂದೆಯೂ ಬೆಳೆವರವರು ಸಮೃದ್ಧಿಯಾಗಿ.

9ಚದರಿದೆನಾದರೂ ಅವರನು ಅನ್ಯರಾಷ್ಟ್ರಗಳಲಿ ಸ್ಮರಿಸಿಕೊಳ್ಳುವರವರು ನನ್ನನು ದೂರದೇಶಗಳಲಿ ಹಿಂದಿರುಗುವರು ಸಂತಾನ ಸಮೇತ ಬದುಕಿಬಾಳಿ.

10ಕರೆತರುವೆನವರನು ಈಜಿಪ್ಟ್, ಅಸ್ಸೀರಿಯ ನಾಡುಗಳಿಂದ ಗಿಲ್ಯಾದ್, ಲೆಬೊನೇನ್‍ಗಳಲ್ಲವರು ಬಂದು ಸೇರುವುದರಿಂದ ತುಂಬಿತುಳುಕುವುವು ಆ ನಾಡುಗಳು ಜನಸ್ತೋಮದಿಂದ.

11ದಾಟಿಬರುವರವರು ಕಷ್ಟವೆಂಬ ಕಡಲನು ಛೇದಿಸಿಬಿಡುವೆನು ಅಲ್ಲಕಲ್ಲೋಲ ಸಮುದ್ರವನು. ತಳದ ತನಕ ಒಣಗಿಹೋಗುವುದು ನೈಲ್ ನದಿಯು ಕುಗ್ಗಿಹೋಗುವುದು ಅಸ್ಸೀರಿಯಾದ ಗರ್ವವು ತಪ್ಪಿಹೋಗುವುದು ಈಜಿಪ್ಟಿನ ರಾಜದರ್ಪವು.

12ಬಲಿಷ್ಠರಾಗುವರಾ ಜನರು ಸರ್ವೇಶ್ವರನಲಿ ಹೆಚ್ಚಳಪಡುವರು ಆತನ ನಾಮದಲಿ,” ನುಡಿದಿಹನು ಸರ್ವೇಶ್ವರ ಈ ರೀತಿಯಲಿ.