ಹಳೆಯ ಒಡಂಬಡಿಕೆKNCL
1ಮಹಿಳೆಯರು : ಮಹಿಳಾಮಣಿಯೇ, ನಿನ್ನಿನಿಯನು ಹೋದುದೆಲ್ಲಿಗೆ? ಅವನನ್ನು ಹುಡುಕೋಣವೇ ನಾವು ನಿನ್ನೊಂದಿಗೆ? ಹೇಳು, ನಿನ್ನಿನಿಯನು ಹೋದುದೆಲ್ಲಿಗೆ? ನಲ್ಲೆ :
2ನನ್ನ ಕಾಂತನು ತೆರಳಿಹನು ಸುಗಂಧ ಸಸ್ಯಗಳಿರುವ ತೋಟಕೆ ಉದ್ಯಾನಗಳಲ್ಲಿ ಮಂದೆಯನು ಮೇಯಿಸುವುದಕೆ ಅಲ್ಲಿನ ನೆಲದಾವರೆಗಳನ್ನು ಕೊಯ್ದು ತರುವುದಕೆ.
3ಎನ್ನಿನಿಯನು ನನ್ನವನೇ, ನಾನು ಅವನವಳೇ ತನ್ನ ಮಂದೆಯ ಮೇಯಿಸುತ್ತಿಹನು ನೆಲದಾವರೆಗಳ ನಡುವೆ. ನಲ್ಲ :
4ನನ್ನ ಪ್ರಿಯಳೇ, ನೀನು ಸುಂದರಿ, ತಿರ್ಚನಗರದಂತೆ ಮನೋಹರಿ, ಜೆರುಸಲೇಮಿನಂತೆ ಭಯಂಕರಿ, ಪತಾಕಿನಿಯಂತೆ.
5ತಿರುಗಿಸು ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ನನ್ನ ಸೆರೆಹಿಡಿದು ಬಿಡುವವು ತಮ್ಮ ನೋಟದಿಂದ. ನಿನ್ನ ಕೇಶರಾಶಿಯ ನರ್ತನ ಗಿಲ್ಯಾದ್ ಗುಡ್ಡದಿಂದ ಇಳಿಯುವ ಆಡುಮಂದೆಗೆ ಸಮಾನ.
6ನಿನ್ನ ಹಲ್ಲುಗಳ ಹೊಳಪು ತೊಳೆದ ಕುರಿಮಂದೆಯ ಬಿಳುಪು ಮೇಲೇರುತ್ತವೆ ಅವು ಜೋಡಿಜೋಡಿಯಾಗಿ ಒಂಟಿಯಾದುದೊಂದು ಇಲ್ಲ ಅವುಗಳಲಿ.
7ಮುಸುಕಿನಲಿ ನಿನ್ನ ಕೆನ್ನೆ ಮಾಗಿ ಒಡೆದಿರುವ ದಾಳಿಂಬೆ.
8ಅರಸನಿಗೆ ರಾಣಿಯರು ಅರವತ್ತು ಮಂದಿ ಉಪಪತ್ನಿಯರು ಎಂಬತ್ತು ಮಂದಿ ಯುವತಿಯರು ಲೆಕ್ಕವಿಲ್ಲದಷ್ಟು ಮಂದಿ.
9ನನ್ನ ಪಾರಿವಾಳ, ನನ್ನ ನಿರ್ಮಲೆ ಇವಳೇ ಏಕಮಾತ್ರ ಪುತ್ರಿ ತಾಯಿಗೆ ಮುದ್ದುಮಗಳು ಹೆತ್ತವಳಿಗೆ. ಈಕೆ ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ ರಾಣಿಯರು, ಉಪಪತ್ನಿಯರು ಕೊಂಡಾಡಿದರು ಈ ಪರಿ :
10“ಉದಯಿಸುತ್ತಿರುವಳಿವಳು ಅರುಣೋದಯದಂತೆ ಸುಂದರಿಯಾಗಿಹಳು ಚಂದ್ರನಂತೆ ಶುಭ್ರಳಾಗಿಹಳು ಸೂರ್ಯನಂತೆ ಭಯಂಕರಳು ಪತಾಕಿನಿಯಂತೆ ಎಂಥವಳಿರಬಹುದು ಇವಳು ಪೇಳೈ?
11ದ್ರಾಕ್ಷಾಬಳ್ಳಿ ಚಿಗುರಿದೆಯೋ ದಾಳಿಂಬೆಗಿಡ ಹೂಬಿಟ್ಟಿದೆಯೋ ಎಂದು ನೋಡಲಿಕೆ ಕಣಿವೆಯಲ್ಲಿರುವ ಕುಸುಮಗಳನು ಕಾಣಲಿಕೆ ನಾ ನಡೆದೆ ಬಾದಾಮಿಯ ತೋಟಕೆ.
12ಇದ್ದಕ್ಕಿದ್ದ ಹಾಗೆಯೇ ನಾಯಕನಾಗಿ ನನ್ನ ನಾಡಿಗೆ ನಾ ಕುಳಿತಿದ್ದೆ ರಥದ ಮೇಲೆ.
13ಶೂಲಮ್ ಊರಿನ ನಾರಿಯೇ ತಿರುಗು ಇತ್ತ, ತಿರುಗು ಅತ್ತ ನಾವು ನಿನ್ನನ್ನು ನೋಡುವಂತೆ ತಿರುಗು ಇತ್ತ, ತಿರುಗು ಅತ್ತ ! ನಲ್ಲೆ : ಎರಡು ಸಾಲಿನ ನರ್ತಕಿಯರ ನಡುವೆ ಕುಣಿಯುವವಳನ್ನು ನೋಡುವಂತೆ ಶೂಲಮ್ ಊರಿನವಳಾದ ನನ್ನನು ನೀನು ನೋಡುವುದೇಕೆ?