ಹೊಸ ಒಡಂಬಡಿಕೆKNCL
1ಹಾಗಾದರೆ ನಾವು ಏನು ಹೇಳೋಣ? ದೈವಾನುಗ್ರಹವು ಹೆಚ್ಚುವಂತೆ ನಾವು ಪಾಪದಲ್ಲೇ ನೆಲೆಗೊಂಡು ಇರೋಣವೇ?
2ಖಂಡಿತವಾಗಿಯೂ ಕೂಡದು. ಪಾಪದ ಪಾಲಿಗೆ ಸತ್ತಿರುವ ನಾವು ಅದರಲ್ಲೇ ಜೀವಿಸುವುದು ಹೇಗೆ ತಾನೆ ಸಾಧ್ಯ?
3ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ?
4ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸಜೀವವನ್ನು ಹೊಂದಿ ಬಾಳುತ್ತೇವೆ.
5ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ.
6ನಮಗೆ ತಿಳಿದಿರುವಂತೆ, ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ.
7ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆಹೊಂದಿದವನು.
8ಕ್ರಿಸ್ತಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ.
9ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ.
10ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ.
11ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.
12ಆದ್ದರಿಂದ ದೈಹಿಕ ದುರಿಚ್ಛೆಗಳಿಗೆ ದಾಸರಾಗಿ ನೀವು ನಡೆಯದಂತೆ, ನಿಮ್ಮ ನಶ್ವರ ಶರೀರಗಳ ಮೇಲೆ ಪಾಪವು ತನ್ನ ದಬ್ಬಾಳಿಕೆಯನ್ನು ಇನ್ನೆಂದಿಗೂ ನಡೆಸದಿರಲಿ.
13ನಿಮ್ಮ ದೇಹದ ಯಾವುದೇ ಅಂಗವು ದುಷ್ಕೃತ್ಯವನ್ನೆಸಗುವ ಸಾಧನವಾಗುವಂತೆ ಪಾಪದ ಕಾರ್ಯಕ್ಕೆ ಅದನ್ನು ಒಪ್ಪಿಸದಿರಿ. ಬದಲಾಗಿ ಸತ್ತು ಜೀವಕ್ಕೆ ಬಂದವರಂತೆ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳಿರಿ; ನಿಮ್ಮ ಅಂಗಗಳನ್ನು ಸತ್ಕಾರ್ಯ ಸಾಧನಗಳನ್ನಾಗಿ ದೇವರಿಗೆ ಒಪ್ಪಿಸಿಕೊಡಿರಿ.
14ಏಕೆಂದರೆ ಪಾಪವು ಇನ್ನೆಂದಿಗೂ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗದು; ನೀವಿನ್ನು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ದೈವಾನುಗ್ರಹಕ್ಕೆ ಮಾತ್ರ ಅಧೀನರು.
15ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರಕ್ಕೆ ಅಧೀನರಾಗಿರದೆ ದೈವಾನುಗ್ರಹಕ್ಕೆ ಅಧೀನರಾಗಿರುವ ನಾವು ಪಾಪಮಾಡುತ್ತಲೆ ಜೀವಿಸೋಣವೆ? ಸರ್ವಥಾ ಇಲ್ಲ.
16ಯಾರ ಕೈಕೆಳಗೆ ಗುಲಾಮರಾಗಿರಲು ನಿಮ್ಮನ್ನೇ ಒಪ್ಪಿಸಿಕೊಳ್ಳುತ್ತೀರೋ ಅವರಿಗೆ ನೀವು ಶರಣಾಗುತ್ತೀರಿ. ನೀವು ಪಾಪಕ್ಕೆ ಗುಲಾಮರಾದರೆ ಮರಣವೇ ನಿಮಗೆ ಗತಿ; ದೇವರಿಗೆ ಶರಣಾದರೆ ಸತ್ಸಂಬಂಧವೇ ಅದರ ಸತ್ಪರಿಣಾಮ.
17ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ. ಏಕೆಂದರೆ, ಹಿಂದೊಮ್ಮೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಕಲಿಸಿದ ಬೋಧನೆಯನ್ನು ನೀವು ಮನಃಪೂರ್ವಕವಾಗಿ ಅಂಗೀಕರಿಸಿ ವಿಧೇಯರಾದಿರಿ;
18ಪಾಪಬಂಧನದಿಂದ ಬಿಡುಗಡೆ ಹೊಂದಿ ದೇವಸಂಬಂಧಕ್ಕೆ ಒಳಗಾದಿರಿ.
19ಇದನ್ನು ಅರ್ಥಮಾಡಿಕೊಳ್ಳಲು ನೀವು ಅಶಕ್ತರಾಗಿರುವುದರಿಂದ ನಾನು ಹೀಗೆ ಸಾಮಾನ್ಯ ರೀತಿಯಲ್ಲಿ ಮಾತನಾಡುತ್ತಿದ್ದೇನೆ. ಹಿಂದೊಮ್ಮೆ ನೀವು ನಿಮ್ಮ ಇಂದ್ರಿಯಗಳನ್ನು ಹೆಚ್ಚುಹೆಚ್ಚಾಗಿ ಅಶ್ಲೀಲತೆಗೂ ಅಕ್ರಮಕ್ಕೂ ಗುಲಾಮರನ್ನಾಗಿಸಿದಿರಿ; ಈಗಲಾದರೋ ಪರಿಶುದ್ಧತೆಗೂ ಸತ್ಸಂಬಂಧಕ್ಕೂ ನಿಮ್ಮ ಇಂದ್ರಿಯಗಳನ್ನು ಅಧೀನರಾಗಿಸಿರಿ.
20ನೀವು ಪಾಪಕ್ಕೆ ಗುಲಾಮರಾಗಿದ್ದಾಗ ದೇವಸಂಬಂಧಕ್ಕೆ ಒಳಗಾಗಿರಲಿಲ್ಲ.
21ಯಾವ ಕೃತ್ಯಗಳ ವಿಷಯದಲ್ಲಿ ಈಗ ನೀವು ನಾಚಿಕೆಪಡುತ್ತೀರೋ ಅವುಗಳನ್ನು ನೀವು ಹಿಂದೆ ಮಾಡುತ್ತಾ ಬಂದಿರಿ. ಅವುಗಳಿಂದ ನಿಮಗೆ ದೊರೆತ ಪ್ರತಿಫಲವಾದರೂ ಏನು? ಮೃತ್ಯುವೇ ಅವುಗಳ ಅಂತ್ಯಫಲ.
22ಆದರೆ ನೀವು ಪಾಪದಿಂದ ಬಿಡುಗಡೆ ಹೊಂದಿರುವಿರಿ. ದೇವರಿಗೆ ದಾಸರಾಗಿರುವಿರಿ. ಇದರಿಂದ ನಿಮಗೆ ಸಿಕ್ಕಿರುವ ಪ್ರತಿಫಲ ಪರಿಶುದ್ಧಜೀವನ; ಅಂತಿಮವಾಗಿ ಅಮರ ಜೀವನ.
23ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ.