ಹೊಸ ಒಡಂಬಡಿಕೆKNCL
1ಸಹೋದರರೇ, ನನ್ನ ಸ್ವಜನರಾದ ಇಸ್ರಯೇಲರು ಜೀವೋದ್ಧಾರ ಹೊಂದಬೇಕೆಂದೇ ನನ್ನ ಹಾರ್ದಿಕ ಹಂಬಲ. ನಾನು ದೇವರಲ್ಲಿ ಮಾಡುವ ಪ್ರಾರ್ಥನೆಯೂ ಇದೇ.
2ದೇವರ ವಿಷಯದಲ್ಲಿ ಅವರು ಬಹಳ ನಿಷ್ಠಾವಂತರು ಎಂದು ಒತ್ತಿಹೇಳಬಲ್ಲೆ. ಆದರೆ ಆ ನಿಷ್ಠೆ ನೈಜಜ್ಞಾನವನ್ನು ಆಧರಿಸಿಲ್ಲ.
3ದೇವರೊಡನೆ ಸತ್ಸಂಬಂಧವನ್ನು ಪಡೆಯುವ ಮಾರ್ಗವನ್ನು ಅರಿಯದೆ ತಮ್ಮದೇ ಆದ ಧರ್ಮವನ್ನು ಸ್ಥಾಪಿಸಲು ಅವರು ಪ್ರಯತ್ನಿಸಿದರು. ಎಂದೇ ಅವರು ದೈವ ಸತ್ಸಂಬಂಧಕ್ಕೆ ಬಾಹಿರರಾದರು.
4ದೇವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೂ ಆ ಸತ್ಸಂಬಂಧ ದೊರಕುವಂತೆ ಕ್ರಿಸ್ತಯೇಸು ಧರ್ಮಶಾಸ್ತ್ರವನ್ನು ಇತಿಗೊಳಿಸಿದರು.
5ಧರ್ಮಶಾಸ್ತ್ರ ಪಾಲನೆಯಿಂದ ಲಭಿಸುವ ಸತ್ಸಂಬಂಧದ ಬಗ್ಗೆ ಮೋಶೆ ಹೀಗೆ ಬರೆದಿದ್ದಾನೆ: “ಧರ್ಮಶಾಸ್ತ್ರದ ನೇಮನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವಿಸುವನು.”
6ಆದರೆ ವಿಶ್ವಾಸದ ಮೂಲಕ ದೊರಕುವ ಸತ್ಸಂಬಂಧದ ಬಗ್ಗೆ ಹೀಗೆ ಬರೆಯಲಾಗಿದೆ: “ಕ್ರಿಸ್ತಯೇಸುವನ್ನು ಕೆಳಕ್ಕೆ ಕರೆತರಲು ಸ್ವರ್ಗಕ್ಕೆ ಏರಿಹೋಗುವವರು ಯಾರು?” ಎಂದಾಗಲೀ,
7“ಕ್ರಿಸ್ತಯೇಸುವನ್ನು ಸಾವಿನಿಂದ ಮೇಲಕ್ಕೆ ಕರೆತರಲು ಪಾತಾಳಕ್ಕೆ ಇಳಿದುಹೋಗುವವರು ಯಾರು?” ಎಂದಾಗಲೀ ನಿನ್ನ ಮನದಲ್ಲಿ ನೀನು ಪ್ರಶ್ನಿಸಿಕೊಳ್ಳಬೇಕಾಗಿಲ್ಲ.
8ಧರ್ಮಗ್ರಂಥವು ಹೇಳುವುದಿಷ್ಟೆ; ದೇವರ ವಾಕ್ಯ ನಿನ್ನ ಸಮೀಪದಲ್ಲೇ ಇದೆ. ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ. ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ.
9“ಯೇಸುಸ್ವಾಮಿಯೇ ಪ್ರಭು” ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ.
10ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ.
11ಏಕೆಂದರೆ, “ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ,” ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ.
12ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ. ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ.
13“ಪ್ರಭುವಿನ ನಾಮಸ್ಮರಣೆಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ,” ಎಂದು ಲಿಖಿತವಾಗಿದೆ.
14ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆ? ಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆ? ಬೋಧಿಸುವವರು ಇಲ್ಲದಿದ್ದರೆ ಅವರ ವಿಷಯವನ್ನು ಕುರಿತು ಕೇಳುವುದಾದರೂ ಹೇಗೆ?
15ಬೋಧಿಸುವವರನ್ನು ಕಳುಹಿಸದೆಹೋದರೆ, ಅವರು ಶುಭಸಂದೇಶವನ್ನು ಬೋಧಿಸುವುದಾದರೂ ಹೇಗೆ? “ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ,” ಎಂದು ಪವಿತ್ರಗ್ರಂಥದಲ್ಲೇ ಬರೆಯಲಾಗಿದೆ.
16ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದ್ದರಿಂದಲೇ, ಯೆಶಾಯನು, “ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?” ಎಂದು ಮೊರೆಯಿಟ್ಟಿದ್ದಾನೆ.
17ಇಂತಿರಲು, ಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ; ಶುಭಸಂದೇಶ ಕ್ರಿಸ್ತಯೇಸುವನ್ನು ಬೋಧಿಸುವುದರ ಮೂಲಕ ಪ್ರಕಟವಾಗುತ್ತದೆ.
18ಈಗ ನನ್ನದೊಂದು ಪ್ರಶ್ನೆ: “ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೆ?” ನಿಶ್ಚಯವಾಗಿ ಇತ್ತು. ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು. ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು.”
19ಹಾಗೆಂದ ಮೇಲೆ ಇಸ್ರಯೇಲರು ಆ ಶುಭಸಂದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ. ಎನ್ನೋಣವೆ? ಮೊದಲನೆಯದಾಗಿ, ಮೋಶೆಯ ಮಾತಿನಲ್ಲಿ ಉತ್ತರಿಸುವುದಾದರೆ: “ ‘ಜನಾಂಗ’ ಎನಿಸಿಕೊಳ್ಳದವರನ್ನು ನೋಡಿ ನೀವು ಅಸೂಯೆಪಡುವಂತೆ ಮಾಡುತ್ತೇನೆ; ಮತಿಹೀನರೆನಿಸಿಕೊಂಡ ಜನಾಂಗವನ್ನು ನೋಡಿ ನೀವು ಕೆರಳುವಂತೆ ಮಾಡುತ್ತೇನೆ.”
20ಯೆಶಾಯನು ಮತ್ತಷ್ಟು ದಿಟ್ಟತನದಿಂದ ಈ ರೀತಿ ಹೇಳಿದ್ದಾನೆ: “ನನ್ನನ್ನು ಅರಸದವರಿಗೂ ನಾನು ಕಾಣಿಸಿಕೊಂಡೆ ನನ್ನ ಬಗ್ಗೆ ವಿಚಾರಿಸದವರಿಗೂ ನಾನು ಪ್ರತ್ಯಕ್ಷನಾದೆ.”
21ಆದರೆ ಇಸ್ರಯೇಲರನ್ನು ಕುರಿತು: “ಅವಿಧೇಯರೂ ಪ್ರತಿಭಟಿಸುವವರೂ ಆದ ಈ ಜನಾಂಗವನ್ನು ದಿನವೆಲ್ಲಾ ನಾನು ಕೈಚಾಚಿ ಕರೆದೆ,” ಎಂದು ಪ್ರವಾದಿಸಿದ್ದಾನೆ.