ಹೊಸ ಒಡಂಬಡಿಕೆKNCL

ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟನೆ 4

1ಇದಾದ ಬಳಿಕ ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದ ಬಾಗಿಲು ತೆರೆದಿತ್ತು. ಮೊದಲು ನನ್ನೊಡನೆ ಮಾತನಾಡಿದ ತುತೂರಿಯಂಥ ನಾದವು ನನಗೆ ಕೇಳಿಸಿತು. ಅದು, “ಮೇಲೆ ಬಾ, ಮುಂದೆ ಸಂಭವಿಸಲಿರುವ ಘಟನೆಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.

2ಕೂಡಲೇ, ನಾನು ದೇವರಾತ್ಮವಶನಾದೆ. ಆಗ ಸ್ವರ್ಗದಲ್ಲಿ ಒಂದು ಸಿಂಹಾಸನ ಇರುವುದನ್ನೂ ಅದರಲ್ಲಿ ಒಬ್ಬರು ಆಸೀನರಾಗಿರುವುದನ್ನೂ ಕಂಡೆ.

3ಅವರ ಮುಖ ಸೂರ್ಯಕಾಂತ ಮತ್ತು ಪದ್ಮರಾಗ ಹರಳುಗಳಂತೆ ಹೊಳೆಯುತ್ತಿತ್ತು. ಸಿಂಹಾಸನದ ಸುತ್ತಲೂ ಮರಕತದಂತೆ ಹೊಳೆಯುವ ಮುಗಿಲುಬಿಲ್ಲೊಂದು ಹೊಳೆಯುತ್ತಿತ್ತು.

4ಈ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಪೀಠಗಳು ಇದ್ದವು. ಶ್ವೇತವಸ್ತ್ರಧಾರಿಗಳಾದ ಇಪ್ಪತ್ನಾಲ್ಕುಮಂದಿ ಸಭಾಪ್ರಮುಖರು ಆ ಪೀಠಗಳಲ್ಲಿ ಕುಳಿತಿದ್ದರು. ಅವರು ತಮ್ಮ ತಲೆಗಳ ಮೇಲೆ ಚಿನ್ನದ ಕಿರೀಟಗಳನ್ನು ಧರಿಸಿದ್ದರು.

5ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರಹೊಮ್ಮುತ್ತಿದ್ದವು. ಆ ಸಿಂಹಾಸನದ ಮುಂದೆ ದೇವರ ಸಪ್ತ ಆತ್ಮಗಳನ್ನು ಸೂಚಿಸುವ ಸಪ್ತದೀಪಗಳು ಬೆಳಗುತ್ತಿದ್ದವು.

6ಇದಲ್ಲದೆ, ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಂಡುಬಂದಿತು. ಸಿಂಹಾಸನದ ಸುತ್ತಲೂ ಅದರ ನಾಲ್ಕು ಪಾರ್ಶ್ವಗಳಲ್ಲಿ ನಾಲ್ಕು ಜೀವಿಗಳು ಇದ್ದವು. ಅವುಗಳಿಗೆ ಮುಂದೆಯೂ ಹಿಂದೆಯೂ ಅನೇಕ ಕಣ್ಣುಗಳಿದ್ದವು.

7ಮೊದಲನೆಯ ಜೀವಿ ಸಿಂಹದಂತೆ ಇತ್ತು. ಎರಡನೆಯ ಜೀವಿ ಹೋರಿಯಂತಿತ್ತು. ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು ಮತ್ತು ನಾಲ್ಕನೆಯ ಜೀವಿಯು ಹಾರುತ್ತಿರುವ ಗರುಡ ಪಕ್ಷಿಯಂತಿತ್ತು.

8ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಅವುಗಳ ಸುತ್ತಲು ಮತ್ತು ಒಳಗು ಅನೇಕ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳೂ : “ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ಪ್ರಭು ದೇವರು ವರ್ತಮಾನಕಾಲದಲ್ಲಿ ಇರುವವರೂ ಭೂತಕಾಲದಲ್ಲಿ ಇದ್ದವರೂ ಭವಿಷ್ಯತ್‍ಕಾಲದಲ್ಲಿ ಬರುವವರೂ ಆಗಿದ್ದಾರೆ,” ಎಂದು ಹಾಡುತ್ತಿದ್ದವು.

9ಯುಗಯುಗಾಂತರಕ್ಕೂ ಜೀವಿಸುವ ಹಾಗೂ ಸಿಂಹಾಸನಾರೂಢರಾಗಿರುವ ವ್ಯಕ್ತಿಗೆ ಆ ಜೀವಿಗಳು ಘನತೆ, ಗೌರವ ಮತ್ತು ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿದ್ದವು.

10ಆ ಇಪ್ಪತ್ನಾಲ್ಕು ಸಭಾಪ್ರಮುಖರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸರ್ವಕಾಲಕ್ಕೂ ಜೀವಿಸುವ ಹಾಗೂ ಸಿಂಹಾಸನದಲ್ಲಿ ಆಸೀನರಾಗಿದ್ದ ವ್ಯಕ್ತಿಯ ಪಾದಗಳಿಗೆ ಅಡ್ಡಬಿದ್ದು ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಾ :

11ನೀನೆಮ್ಮ ಪ್ರಭು ಹೇ ದೇವಾ, ಘನಮಾನ ಶಕ್ತಿಸನ್ಮಾನಗಳಿಗರ್ಹ, ಸಮಸ್ತವನು ನೀ ಸೃಷ್ಟಿಸಿದಾತ ಇರುವುದೆಲ್ಲವು ಜೀವಿಪುದೆಲ್ಲವು ನಿನ್ನ ಚಿತ್ತದಿಂದ,” ಎಂದು ಹಾಡುತ್ತಿದ್ದರು.