ಹೊಸ ಒಡಂಬಡಿಕೆKNCL
1ಬಳಿಕ ಆ ದೇವದೂತನು ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ಸ್ಫಟಿಕದಂತೆ ಮಿನುಗುತ್ತಿತ್ತು. ಅದು ದೇವರ ಹಾಗೂ ಯಜ್ಞದ ಕುರಿಮರಿಯ ಸಿಂಹಾಸನದಲ್ಲಿ ಉಗಮಿಸಿ,
2ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು.
3ಶಾಪಗ್ರಸ್ತವಾದುದು ಯಾವುದೂ ಆ ನಗರದಲ್ಲಿ ಇರದು. ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವು ಅಲ್ಲಿರುವುದು. ಸದಾ ಯಾಜಕ ಸೇವೆ ಸಲ್ಲಿಸುವ ಅವರ ದಾಸರಿಗೆ ಅದರ ಮುಖ ದರ್ಶನವಾಗುವುದು.
4ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು.
5ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು.
6ಅನಂತರ ಆ ದೇವದೂತನು ನನಗೆ, “ಈ ಮಾತುಗಳು ಸತ್ಯವಾದುವು, ನಂಬಲರ್ಹವಾದುವು. ಪ್ರವಾದಿಗಳಿಗೆ ಆತ್ಮಪ್ರೇರಣೆಯನ್ನೀಯುವ ದೇವರಾದ ಪ್ರಭುವೇ ಬೇಗನೆ ಸಂಭವಿಸಲಿರುವವುಗಳನ್ನು ತಮ್ಮ ದಾಸರಿಗೆ ತಿಳಿಸಲು ತಮ್ಮ ದೂತನನ್ನೇ ಕಳಿಸಿದ್ದಾರೆ.
7“ಯೇಸುಸ್ವಾಮಿ ನುಡಿಯುವುದನ್ನು ಕೇಳು : ‘ಇಗೋ ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!” ಎಂದು ಹೇಳಿದನು.
8ಯೊವಾನ್ನನೆಂಬ ನಾನೇ ಇವುಗಳನ್ನೆಲ್ಲಾ ಕೇಳಿದವನು ಮತ್ತು ಕಂಡವನು. ಇವುಗಳನ್ನು ಕಂಡು ಕೇಳಿದಾಗ, ಇವುಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಆತನ ಪಾದಗಳಿಗೆ ಅಡ್ಡಬಿದ್ದೆ.
9ಆದರೆ ಆತನು, “ನೀನು ನನಗೆ ಅಡ್ಡಬೀಳಬೇಡ, ಪ್ರವಾದಿಗಳಾದ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಂಡು ನಡೆಯುವವರಿಗೂ ನಿನಗೂ ನಾನು ಸಹಸೇವಕನು ಮಾತ್ರ. ಆದ್ದರಿಂದ ನೀನು ದೇವರನ್ನು ಆರಾಧಿಸು,” ಎಂದು ತಿಳಿಸಿದನು.
10ಇದಲ್ಲದೆ ಆತನು ನನಗೆ, “ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳಿಗೆ ಮುದ್ರೆಹಾಕಿ ಮುಚ್ಚಿಡಬೇಡ; ಇವು ನೆರವೇರುವ ಕಾಲವು ಸಮೀಪಿಸಿತು.
11ಅಕ್ರಮಿಯು ತನ್ನ ಅಕ್ರಮವನ್ನು ಮುಂದುವರೆಸಲಿ. ಅಶುದ್ಧನು ತನ್ನ ಅಶುದ್ಧತೆಯಲ್ಲಿ ಮುಂದುವರೆಯಲಿ. ಸಜ್ಜನನು ತನ್ನ ಸನ್ನಡತೆಯಲ್ಲಿಯೇ ನಿರತನಾಗಿರಲಿ. ಪವಿತ್ರನು ತನ್ನ ಪಾವಿತ್ರ್ಯತೆಯನ್ನು ಹೆಚ್ಚಿಸಿಕೊಳ್ಳಲಿ,” ಎಂದನು.
12“ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ. ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ಕೊಡಲಾಗುವ ಪ್ರತಿಫಲವು ನನ್ನ ಕೈಯಲ್ಲೇ ಇದೆ.
13‘ಅ'ಕಾರವೂ ‘ಳ'ಕಾರವೂ ನಾನೇ ಆದಿಯೂ ಸಮಾಪ್ತಿಯೂ ನಾನೇ'. “
14“ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರವಾಗಿಟ್ಟುಕೊಂಡಿರುವವರು ಭಾಗ್ಯವಂತರು. ಜೀವವೃಕ್ಷದ ಫಲವನ್ನು ಸವಿಯುವ ಹಕ್ಕು ಅವರಿಗಿರುತ್ತದೆ. ಹೆಬ್ಬಾಗಿಲಿನ ಮೂಲಕ ಅವರು ಆ ನಗರವನ್ನು ಸೇರುವರು.
15ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು.
16“ಯೇಸುವೆಂಬ ನಾನೇ ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ನಿಮಗೆ ಸಾಕ್ಷಿನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ನಾನು ದಾವೀದಕುಲಪುತ್ರ. ಅದೇ ವಂಶದ ಕುಡಿ; ಉದಯಕಾಲದ ಉಜ್ವಲ ನಕ್ಷತ್ರ!
17ದೇವರಾತ್ಮ ಹಾಗು ಮದುವಣಗಿತ್ತಿ, ‘ಬಾ’ ಎಂದು ಆಹ್ವಾನಿಸುತ್ತಾರೆ. ಇದನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬನೂ ‘ಬಾ’ ಎಂದು ಹೇಳಲಿ. ಬಾಯಾರಿದವನು ಬರಲಿ; ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ಪಡೆಯಲಿ.”
18ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೂ ನಾನು ಕೊಡುವ ಎಚ್ಚರಿಕೆ ಇದು: “ಯಾವನಾದರೂ ಇವುಗಳಿಗೆ ಏನನ್ನಾದರೂ ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ವಿಪತ್ತುಗಳು ಬಂದೆರಗುವಂತೆ ಮಾಡುವರು.
19ಯಾವನಾದರೂ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳಲ್ಲಿ ಏನನ್ನಾದರೂ ತೆಗೆದುಹಾಕಿದರೆ, ಈ ಪುಸ್ತಕದಲ್ಲಿ ವಿವರಿಸಿರುವ ಜೀವವೃಕ್ಷದಲ್ಲಿಯೂ ಪವಿತ್ರನಗರದಲ್ಲಿಯೂ ಅವನಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.”
20ಇದಕ್ಕೆಲ್ಲಾ ಸಾಕ್ಷಿಯಾಗಿರುವಾತನು, “ಹೌದು, ನಾನು ಬೇಗನೆ ಬರುತ್ತೇನೆ,” ಎಂದು ಹೇಳುತ್ತಾನೆ. ಆಮೆನ್, ಪ್ರಭು ಯೇಸುವೇ, ಬನ್ನಿ.
21ಪ್ರಭು ಯೇಸುವಿನ ಕೃಪಾಶೀರ್ವಾದಗಳು ಎಲ್ಲರಲ್ಲೂ [1] ಇರಲಿ !