ಹೊಸ ಒಡಂಬಡಿಕೆKNCL

ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟನೆ 17

1ಏಳು ಪಾತ್ರೆಗಳನ್ನು ಹಿಡಿದಿದ್ದ ಏಳುಮಂದಿದೇವದೂತರುಗಳಲ್ಲಿ ಒಬ್ಬನು ಬಂದನು. ಆತ ನನಗೆ, “ಇಲ್ಲಿಗೆ ಬಾ, ಜಲರಾಶಿಗಳ ಮೇಲೆ ನಿಂತಿರುವ ಕುಖ್ಯಾತ ವೇಶ್ಯೆಗೆ ಬರುವ ದಂಡನೆಯನ್ನು ನಿನಗೆ ತೋರಿಸುತ್ತೇನೆ;

2ಭೂರಾಜರು ಅವಳೊಂದಿಗೆ ಹಾದರ ಮಾಡಿದರು. ಭೂನಿವಾಸಿಗಳು ಅವಳ ಹಾದರವೆಂಬ ಮದ್ಯಸೇವಿಸಿ ಮತ್ತರಾದರು,” ಎಂದು ಹೇಳಿದನು.

3ನಾನು ದೇವರಾತ್ಮ ವಶನಾದೆ. ಆಗ ದೇವದೂತನು ನನ್ನನ್ನು ಅಡವಿಗೆ ಕೊಂಡೊಯ್ದನು. ಅಲ್ಲಿ, ಒಂದು ಕಡುಗೆಂಪಾದ ಮೃಗದ ಮೇಲೆ ಕುಳಿತಿದ್ದ ಸ್ತ್ರೀಯೊಬ್ಬಳನ್ನು ಕಂಡೆ. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಮಾತುಗಳೇ ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.

4ಆ ಸ್ತ್ರೀ ಕೆನ್ನೀಲಿಯ ಹಾಗೂ ಕಡುಗೆಂಪಾದ ಬಟ್ಟೆಯನ್ನು ಧರಿಸಿದ್ದಳು; ಚಿನ್ನ, ಮುತ್ತು, ರತ್ನಾಭರಣಗಳಿಂದ ಅಲಂಕೃತಳಾಗಿದ್ದಳು. ಕೈಯಲ್ಲಿ ಚಿನ್ನದ ಪಾತ್ರೆಯನ್ನೂ ಹಿಡಿದಿದ್ದಳು. ಅವಳ ಹಾದರದ ಅಸಹ್ಯಗಳಿಂದಲೂ ಕಳಂಕಗಳಿಂದಲೂ ಅದು ತುಂಬಿತ್ತು.

5ಅವಳ ಹಣೆಯ ಮೇಲೆ : ಬಾಬಿಲೋನ್ ಮಹಾನಗರಿ ವೇಶ್ಯೆಯರ ಮಹಾತಾಯಿ ಜಗತ್ತಿನ ದುರ್ನಡತೆಗಳ ಜನನಿ,” ಎಂಬ ನಿಗೂಢವಾದ ಹೆಸರಿತ್ತು.

6ದೇವಜನರ ರಕ್ತವನ್ನು ಮತ್ತು ಕ್ರಿಸ್ತೇಸುವಿಗೋಸ್ಕರ ಹುತಾತ್ಮರಾದವರ ರಕ್ತವನ್ನು ಹೀರಿ ಮತ್ತಳಾಗಿದ್ದಳು ಅವಳು. ಇದನ್ನು ಕಂಡು ನನಗೆ ದಿಗ್ಭ್ರಮೆಯಾಯಿತು.

7ಆ ದೇವದೂತನು ನನಗೆ ಹೀಗೆ ಹೇಳಿದನು : “ನೀನು ದಿಗ್ಭ್ರಮೆಗೊಂಡಿರುವುದೇಕೆ? ಆ ಸ್ತ್ರೀಯ ಹಾಗೂ ಅವಳ ವಾಹನವಾಗಿರುವ ಏಳು ತಲೆ, ಹತ್ತು ಕೊಂಬುಗಳುಳ್ಳ ಮೃಗದ ನಿಗೂಢತೆಯನ್ನು ನಾನು ನಿನಗೆ ವಿವರಿಸುತ್ತೇನೆ.

8ನೀನು ಕಂಡ ಈ ಮೃಗ ಒಮ್ಮೆ ಇತ್ತು. ಆದರೆ ಈಗ ಇಲ್ಲ. ಅದು ಪಾತಾಳಕೂಪದಿಂದ ಬಂದು ವಿನಾಶದತ್ತ ತೆರಳುತ್ತದೆ. ಭೂನಿವಾಸಿಗಳಲ್ಲಿ ಲೋಕಾದಿಯಿಂದ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳನ್ನು ಬರೆದಿಲ್ಲವೋ ಅಂಥವರು ಅದನ್ನು ಕಂಡು ದಿಗ್ಭ್ರಮೆಗೊಳ್ಳುವರು. ಏಕೆಂದರೆ, ಈ ಮೃಗ ಒಮ್ಮೆ ಇತ್ತು, ಆದರೆ ಈಗ ಇಲ್ಲ. ಆದರೆ ಅದು ಮತ್ತೊಮ್ಮೆ ಬರಲಿದೆ.

9“ಇದನ್ನು ಗ್ರಹಿಸಿಕೊಳ್ಳಲು ಬುದ್ಧಿ ಸಾಮರ್ಥ್ಯವಿರಬೇಕು. ಏಳು ತಲೆಗಳು ಆ ಸ್ತ್ರೀ ಕುಳಿತಿರುವ ಏಳು ಬೆಟ್ಟಗಳನ್ನೂ ಏಳು ರಾಜರನ್ನೂ ಸೂಚಿಸುತ್ತವೆ.

10ಈ ಏಳು ರಾಜರಲ್ಲಿ ಈಗಾಗಲೇ ಐದುಮಂದಿ ಪತನಹೊಂದಿದ್ದಾರೆ. ಒಬ್ಬ ರಾಜನು ಈಗ ಆಳುತ್ತಿದ್ದಾನೆ. ಮತ್ತೊಬ್ಬನು ಇನ್ನೂ ತಲೆದೋರಿಲ್ಲ. ಅವನು ಬಂದಾಗ ಕೊಂಚಕಾಲ ಮಾತ್ರ ರಾಜ್ಯವಾಳುತ್ತಾನೆ.

11ಹಿಂದೊಮ್ಮೆ ಇದ್ದು ಈಗ ಇಲ್ಲದಿರುವ ಮೃಗವು ಎಂಟನೆಯ ರಾಜನನ್ನು ಸೂಚಿಸುತ್ತದೆ. ಅದು ಆ ಏಳುಮಂದಿಗೆ ಸೇರಿದುದು ಮತ್ತು ವಿನಾಶದತ್ತ ತೆರಳುವಂಥಾದ್ದು.

12“ನೀನು ಕಂಡ ಹತ್ತು ಕೊಂಬುಗಳು ಹತ್ತು ರಾಜರುಗಳನ್ನು ಸೂಚಿಸುತ್ತವೆ. ಅವರು ಇನ್ನೂ ರಾಜ್ಯಭಾರವನ್ನು ವಹಿಸಿಕೊಂಡಿಲ್ಲ. ಆ ಮೃಗದ ಜೊತೆಯಲ್ಲಿ ರಾಜ್ಯವಾಳಲು ಒಂದು ಗಂಟೆಯವರೆಗೆ ಅವರಿಗೆ ಅಧಿಕಾರವನ್ನು ಕೊಡಲಾಗುವುದು.

13ಅವರು ಒಮ್ಮನಸ್ಸಿನವರಾಗಿ ತಮ್ಮ ಶಕ್ತಿಸಾಮರ್ಥ್ಯವನ್ನೂ ಅಧಿಕಾರವನ್ನೂ ಆ ಮೃಗಕ್ಕೆ ಒಪ್ಪಿಸಿಬಿಡುತ್ತಾರೆ.

14ಅವರು ಯಜ್ಞದ ಕುರಿಮರಿಯ ಮೇಲೆ ಯುದ್ಧಮಾಡುವರು. ಆದರೆ ಯಜ್ಞದ ಕುರಿಮರಿಗೆ ಜಯವಾಗುವುದು. ಆ ಕುರಿಮರಿಯು ಒಡೆಯರಿಗೆಲ್ಲಾ ಒಡೆಯನೂ ರಾಜಾಧಿರಾಜನೂ ಆಗಿರುವುದೇ ಇದಕ್ಕೆ ಕಾರಣ. ದೇವರ ಕರೆ ಹೊಂದಿದವರೂ ದೇವರು ಆಯ್ದುಕೊಂಡವರೂ ಆದ ಪ್ರಾಮಾಣಿಕ ಅನುಯಾಯಿಗಳು ಆ ಜಯದಲ್ಲಿ ಪಾಲುಗಾರರಾಗುವರು,” ಎಂದನು.

15ಆ ದೇವದೂತನು ಮುಂದುವರೆದು ಹೀಗೆ ನುಡಿದನು : “ಜಲರಾಶಿಗಳ ಮೇಲೆ ನಿಂತಿದ್ದ ಆ ವೇಶ್ಯೆಯನ್ನು ನೋಡಿದೆಯಲ್ಲಾ ! ಆ ಜಲರಾಶಿಯು ಜನಾಂಗಗಳನ್ನೂ ಜನಸಮೂಹವನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತದೆ.

16ನೀನು ಕಂಡ ಮೃಗವೂ ಅದರ ಹತ್ತು ಕೊಂಬುಗಳೂ ಆ ವೇಶ್ಯೆಯನ್ನು ದ್ವೇಷಿಸುವವರನ್ನು ಸೂಚಿಸುತ್ತದೆ. ಅವರು ಅವಳನ್ನು ನಿರ್ಗತಿಕಳನ್ನಾಗಿ ಮಾಡುವರು, ಬೆತ್ತಲೆಯಾಗಿಸುವರು; ಅವಳ ಮಾಂಸವನ್ನು ಕಿತ್ತು ತಿನ್ನುವರು; ಅವಳನ್ನೇ ಬೆಂಕಿಯಲ್ಲಿ ಸುಟ್ಟುಬಿಡುವರು.

17ಹೀಗೆ ದೈವಸಂಕಲ್ಪವು ನೆರವೇರಬೇಕೆಂದು ದೇವರೇ ಆ ಜನರನ್ನು ಪ್ರೇರೇಪಿಸುವರು. ಇದೇ ಪ್ರೇರಣೆಯಿಂದಾಗಿ ದೇವರ ವಾಕ್ಯ ನೆರವೇರುವವರೆಗೆ ಅವರು ಒಮ್ಮನಸ್ಸಿನಿಂದ ರಾಜ್ಯಾಧಿಕಾರವನ್ನು ಆ ಮೃಗಕ್ಕೆ ಒಪ್ಪಿಸಿಬಿಡುವರು.

18ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಅಧಿಕಾರವುಳ್ಳ ಮಹಾನಗರದ ಸೂಚನೆಯಾಗಿದ್ದಾಳೆ.”