ಹೊಸ ಒಡಂಬಡಿಕೆKNCL

ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟನೆ 12

1ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು.

2ಆಕೆ ತುಂಬು ಗರ್ಭಿಣಿ, ಪ್ರಸವ ವೇದನೆಯಿಂದ ನರಳುತ್ತಿದ್ದಳು.

3ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು.

4ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತ್ತು.

5ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು.

6ಆ ಮಹಿಳೆ ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು.

7ಸ್ವರ್ಗದಲ್ಲಿ ಒಂದು ಯುದ್ಧ ಪ್ರಾರಂಭವಾಯಿತು. ಮಿಕಾಯೇಲನು ತನ್ನ ಸಹದೂತರ ಸಹಿತ ಘಟಸರ್ಪದ ವಿರುದ್ಧ ಯುದ್ಧಮಾಡಿದನು. ಘಟಸರ್ಪವೂ ತನ್ನ ದೂತರ ಸಮೇತ ಯುದ್ಧದಲ್ಲಿ ಕಾದಾಡಿತು.

8ಆದರೆ ಜಯಗಳಿಸುವಷ್ಟು ಸಾಮರ್ಥ್ಯ ಘಟಸರ್ಪಕ್ಕಿರದೆ ಅದು ಸೋಲನ್ನಪ್ಪಿತು. ಹೀಗೆ ಸ್ವರ್ಗದಲ್ಲಿ ಅದಕ್ಕೂ ಅದರ ದೂತರಿಗೂ ಸ್ಥಳವಿಲ್ಲದಂತಾಯಿತು.

9ಸಮಸ್ತ ಜಗತ್ತನ್ನೂ ವಂಚಿಸುತ್ತಿದ್ದ ಆ ಮಹಾಘಟಸರ್ಪವನ್ನು ಭೂಮಿಗೆ ತಳ್ಳಲಾಯಿತು. ಈ ಪುರಾತನ ಸರ್ಪಕ್ಕೆ ‘ಪಿಶಾಚಿ’ ಎಂತಲೂ ‘ಸೈತಾನ’ ಎಂತಲೂ ಹೆಸರು. ಅದರ ದೂತರನ್ನು ಅದರೊಡನೆ ತಳ್ಳಲಾಯಿತು.

10ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು : “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.

11ಜಯಿಸಿದರು ಸೋದರರು ಆ ನಿಂದಕನನ್ನು ಯಜ್ಞದ ಕುರಿಮರಿಯ ರಕ್ತದಿಂದ ಸತ್ಯಕ್ಕೆ ಸಾಕ್ಷಿಯನ್ನಿತ್ತುದರಿಂದ ಜೀವದಾಶೆಯನು ತೊರೆದುದರಿಂದ ಮರಣದ ಭಯವನು ಬಿಸುಟುದರಿಂದ.

12ಎಂದೇ ಸ್ವರ್ಗಲೋಕ, ಸ್ವರ್ಗನಿವಾಸಿಗಳೆಲ್ಲ ನಲಿಯಲಿ ! ಕ್ಷಿತಿಸಾಗರಗಳಿಗೆ ಒದಗಿದೆ ದುರ್ಗತಿ. ಬಂದಿಹನು ಪಿಶಾಚಿ ಕಡುರೋಷದಿಂದ ತನಗಿರುವ ಕಾಲ ತುಸುವೆಂಬ ತವಕದಿಂದ.”

13ಘಟಸರ್ಪವು ತನ್ನನ್ನು ಭೂಮಿಗೆ ತಳ್ಳಲಾಗಿರುವುದನ್ನು ಅರಿತು, ಗಂಡುಮಗುವಿಗೆ ಜನ್ಮವಿತ್ತ ಆ ಮಹಿಳೆಯನ್ನು ಅಟ್ಟಿಸಿಕೊಂಡು ಓಡಿತು.

14ಆಗ ಆ ಮಹಿಳೆ ಅರಣ್ಯದಲ್ಲಿರುವ ತನ್ನ ಸ್ಥಳಕ್ಕೆ ಹಾರಿಹೋಗುವಂತೆ ದೊಡ್ಡ ಗರುಡಪಕ್ಷಿಗಿರುವಂಥ ಎರಡು ರೆಕ್ಕೆಗಳನ್ನು ಆಕೆಗೆ ಕೊಡಲಾಯಿತು. ಅಲ್ಲಿ ಘಟಸರ್ಪದ ಕಣ್ಣಿಗೆ ಬೀಳದೆ ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುವಂತಾಯಿತು.

15ಆ ಘಟಸರ್ಪ ತನ್ನ ಬಾಯಿಂದ ನೀರನ್ನು ನದಿಯಂತೆ ಸುರಿಸುತ್ತಾ ಅದರಲ್ಲಿ ಆ ಮಹಿಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲು ಯತ್ನಿಸಿತು.

16ಆದರೆ ಭೂಮಿ ಆಕೆಯ ನೆರವಿಗೆ ಬಂದಿತು. ಅದು ತನ್ನ ಬಾಯನ್ನು ತೆರೆದು ಘಟಸರ್ಪದ ಬಾಯಿಂದ ಹೊರಬಂದ ನದಿಯನ್ನು ಕುಡಿದುಬಿಟ್ಟಿತು.

17ಇದರಿಂದಾಗಿ ಘಟಸರ್ಪಕ್ಕೆ ಆ ಮಹಿಳೆಯ ಮೇಲೆ ತೀವ್ರತರ ರೋಷವುಂಟಾಯಿತು. ಆಕೆಯ ಇನ್ನುಳಿದ ಸಂತತಿಯವರ ಮೇಲೆ, ಅಂದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವವರ ಮೇಲೆ ಹಾಗೂ ಯೇಸುಸ್ವಾಮಿಯ ಪರವಾಗಿ ಸಾಕ್ಷಿನೀಡುವವರ ಮೇಲೆ, ಯುದ್ಧಮಾಡಲು ಹೊರಟುಹೋಯಿತು.