ಹಳೆಯ ಒಡಂಬಡಿಕೆKNCL
1ವಹಿಸಿಹನು ಪ್ರಭು ರಾಜ್ಯಾಧಿಕಾರವನು : ನಡುಗುತಿಹುದು ಜನಾಂಗವು I ಕೆರೂಬಿಯರ ಮಧ್ಯೆ ಆಸೀನನಾಗಿಹನು : ಕಂಪಿಸುತಿಹುದು ಜಗವು II
2ಸಿಯೋನಿನಲಿ ಪ್ರಭು ಶ್ರೇಷ್ಠನು I ರಾಷ್ಟ್ರಗಳಲ್ಲೆಲ್ಲಾ ಉತ್ಕೃಷ್ಠನು II
3ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು I ಆತ ಘನಗಂಭೀರನು, ಸ್ತುತಿಸಲಿ ಆತನ ಶ್ರೀನಾಮವನು II
4ಶಕ್ತಿಸ್ವರೂಪಿಯೇ, ನ್ಯಾಯಪ್ರಿಯ ರಾಜನೇ I ನ್ಯಾಯನೀತಿ, ಯಥಾರ್ಥತೆಗೆ ಸ್ಥಾಪಕ ನೀನೆ I ಇಸ್ರಯೇಲ ವಂಶಕ್ಕಿದನು ಮನದಟ್ಟಾಗಿಸಿದವ ನೀನೆ II
5ಪರಮ ಪಾವನನು ನಮ್ಮೀ ಸ್ವಾಮಿ ದೇವನು I ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು II
6ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನನು I ಸಮುವೇಲನು ಸಹ ಆತನ ಶರಣರಲಿ ಒಬ್ಬನು I ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದನು II
7ಮೇಘಸ್ತಂಭದಲಿದ್ದು ಅವರೊಡನೆ ಮಾತಾಡಿದನು I ಕೈಗೊಂಡರು ಅವರು ಆತನಿತ್ತ ವಿಧಿನಿಯಮಗಳನು II
8ಸ್ವಾಮಿ ದೇವಾ, ನೀನವರಿಗೆ ಸದುತ್ತರ ಪಾಲಿಸಿದೆ I ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ ದೇವನಾಗಿದ್ದೆ II
9ಘನಪಡಿಸಿರೆಮ್ಮ ಸ್ವಾಮಿ ದೇವನನು I ಶ್ರೀಪರ್ವತದಲಿ ವಂದಿಸಿ ಆತನನು I ಪರಮಪವಿತ್ರನು ಆ ನಮ್ಮ ದೇವನು II