ಹಳೆಯ ಒಡಂಬಡಿಕೆKNCL

ಕೀರ್ತನೆಗಳು 91

1ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು I ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು II

2ನಾನಾತನಿಗೆ, ‘ನೀನೇ ನನ್ನ ರಕ್ಷಕನೂ I ದುರ್ಗವೂ ನಾ ನಂಬಿದ ದೇವನು’ ಎನ್ನುವೆನು II

3ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ I ರಕ್ಷಿಸುವನು ಮಾರಕವಾದ ವ್ಯಾಧಿಯಿಂದ II

4ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ I ಆಶ್ರಯಪಡುವೆ ನೀ ಆತನ ರೆಕ್ಕೆಗಳಡಿಯಲಿ I ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ II

5ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ I ಹಗಲಿನಲಿ ಹಾರಿಬರುವ ಬಿರುಸು ಬಾಣಕೆ II

6ಕತ್ತಲೆಯಲಿ ಸಂಚರಿಸುವ ವಿಪತ್ತಿಗೆ I ನಡುಹಗಲಲೆ ಪೀಡಿಸುವ ಜಾಡ್ಯಕೆ II

7ಬೀಳಬಹುದು ಸಾವಿರ ಹೆಣಗಳು ಪಕ್ಕದಲೆ I ಹತ್ತುಸಾವಿರ ಹೆಣಗಳು ನಿನ್ನ ಬಲಗಡೆಯಲೆ I ಅಂಥ ಕೇಡೊಂದೂ ಬಾರದು ನಿನ್ನ ಪಾಲಿಗೆ II

8ನೀನಿದನು ಕಣ್ಣಾರೆ ಕಾಣುವೆ I ದುರುಳರ ದಂಡನೆಯನು ನೋಡುವೆ II

9ಪ್ರಭುವನೆ ನಿನ್ನಾಶ್ರಯವಾಗಿಸಿಕೊಂಡಿರುವುದರಿಂದ I ಪರಾತ್ಪರನನೆ ನಿನ್ನ ನಿವಾಸ ಆಗಿಸಿಕೊಂಡದ್ದರಿಂದ II

10ಹಾನಿಯೊಂದೂ ನಿನಗೆ ಸಂಭವಿಸದು I ಕೆಡಕು ನಿನ್ನ ಗುಡಾರದ ಬಳಿ ಸುಳಿಯದು II

11ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ I ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ II

12ನಿನ್ನ ಕಾಲು ಕಲ್ಲಿಗೆ ತಾಗದಂತೆ I ನಿನ್ನನೆತ್ತಿಕೊಳ್ವರವರು ಕೈಗಳಲೆ II

13ಸಿಂಹಗಳ ಮೇಲೂ, ಸರ್ಪಗಳ ಮೇಲೂ ನಡೆಯುವೆ I ಪ್ರಾಯದ ಸಿಂಹವನು, ಘಟಸರ್ಪವನು ತುಳಿದುಬಿಡುವೆ II

14ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು I ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು II

15ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು I ಸಂಕಟದೊಳು ಅವನ ಸಂಗಡವಿರುವೆನು I ಅವನನು ಉದ್ಧರಿಸಿ ಘನಪಡಿಸುವೆನು II

16ದೀರ್ಘಾಯುಸ್ಸನ್ನಿತ್ತು ತೃಪ್ತಿಪಡಿಸುವೆನು I ನಾನು ನೀಡುವ ಮುಕ್ತಿಯನವನಿಗೆ ಮನಗಾಣಿಸುವೆನು” II