ಹಳೆಯ ಒಡಂಬಡಿಕೆKNCL

ಕೀರ್ತನೆಗಳು 90

1ಪ್ರಭೂ, ತಲತಲಾಂತರಕ್ಕೆ I ಶ್ರೀನಿವಾಸ ನೀನೆಮಗೆ II

2ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ I ಭೂದೇಶಗಳು ಆಗುವುದಕೆ ಮೊದಲಿಂದ I ನೀನೆಮಗೆ ದೇವರು ಯುಗಯುಗಗಳಿಂದ II

3ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ I ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ ಎನ್ನುತಿಹೆ II

4ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ I ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ II

5ಮನುಜರು ನೀ ಹರಿದೋಡಿಸುವ ಹೊಯಿಲು I ಇರುಳಿನ ಕನಸು, ಹಗಲಿನ ಗರಿಹುಲ್ಲು II

6ಚಿಗುರಿ ಹೂಬಿಡುವುದದು ಬೆಳಗಿನಲಿ I ಸೊರಗಿ ತರಗಾಗುವುದು ಬೈಗಿನಲಿ II

7ಇಲ್ಲವಾಗುವೆವು ನಿನ್ನ ಕೋಪದಿಂದ I ತಲ್ಲಣಗೊಳ್ವೆವು ನಿನ್ನ ರೌದ್ರದಿಂದ II

8ನಿನ್ನ ನೋಟಕೆ ಮರೆಯಾಗಿಲ್ಲ ನಮ್ಮ ಪಾಪದೋಷಗಳು I ನಿನ್ನ ಮುಖಕಾಂತಿಗೆ ಬಟ್ಟಬಯಲಾಗಿವೆ ಗುಪ್ತಾಪರಾಧಗಳು II

9ನಿನ್ನ ಕನಲಿನಲೇ ಕಳೆದಿವೆ ನಮ್ಮ ದಿನಗಳು I ನಿಟ್ಟುಸಿರಿನಂತೆ ಮುಗಿವುದೆಮ್ಮ ಬದುಕುಬಾಳು II

10ನಮ್ಮ ಆಯುಷ್ಕಾಲ ಎಪ್ಪತ್ತು ವರುಷ I ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ II

11ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II

12ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು I ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು II

13ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ? I ನಿನ್ನೀ ಸೇವಕರ ಮೇಲಿರಲಿ ಮರುಕ II

14ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ I ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ II

15ಸುಖಪಡಿಸೆಮ್ಮನು ನೀ ಕಷ್ಟಪಡಿಸಿದಷ್ಟು ಕಾಲ I ಕೆಡುಕನ್ನು ನಾವು ಅನುಭವಿಸಿದಷ್ಟು ವರ್ಷಕಾಲ II

16ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ I ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ II

17ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲಿರಲಿ I ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ I ಅಹುದು, ನಮ್ಮ ಕಾರ್ಯಗಳೆಲ್ಲಾ ಸಫಲವಾಗಲಿ II