ಹಳೆಯ ಒಡಂಬಡಿಕೆKNCL

ಕೀರ್ತನೆಗಳು 86

1ಹೇ ಪ್ರಭು, ನೀಡೆನಗೆ ಸದುತ್ತರವನು I ಕಿವಿಗೊಡು, ದೀನನು, ದಲಿತನು ನಾನು II

2ಕಾಪಾಡು ಪ್ರಭು, ನಾ ನಿನ್ನ ಭಕ್ತನು I ಉದ್ಧರಿಸು ನಿನ್ನ ನಂಬಿದ ದಾಸನನು II

3ನೀನೆನಗೆ ದೇವನು, ಕರುಣಿಸೆನ್ನನು I ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು II

4ನಿನ್ನ ದಾಸನಿಗೆ ನೀಡು ಮನದಾನಂದವನು I ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು II

5ಪ್ರಭು, ನೀನು ದಯಾವಂತನು, ಕ್ಷಮಿಸುವವನು I ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು II

6ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ I ನನ್ನ ವಿಜ್ಞಾಪನೆಗಳ ಕೋರಿಕೆಗೆ II

7ಸಂಕಟಬಂದಾಗ ನಿನಗೆ ಮೊರೆಯಿಡುವೆ I ಸದುತ್ತರ ಪಾಲಿಸುವೆಯೆಂದು ನಂಬಿರುವೆ II

8ದೇವರುಗಳಲಿ ಪ್ರಭು, ನಿನ್ನಂಥವನಿಲ್ಲ I ನಿನ್ನ ಮಹತ್ಕಾರ್ಯಗಳಿಗೆ ಸಾಟಿಯೇ ಇಲ್ಲ II

9ಬರುವುವು ನೀನುಂಟುಮಾಡಿದ ಸಕಲ ಜನಾಂಗಗಳು I ನಿನ್ನ ನಾಮವನು ಘನಪಡಿಸಲು, ನಿನಗೆ ಅಡ್ಡಬೀಳಲು II

10ಪ್ರಭು, ನೀನೊಬ್ಬನೇ ದೇವನು I ಅದ್ಭುತಶಾಲಿ, ಮಹೋನ್ನತನು II

11ನಿನ್ನ ಸತ್ಯಪಥದಲಿ ನಾ ನಡೆವಂತೆ I ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು II ನಿನ್ನ ನಾಮದಲಿ ಭಯಭಕ್ತಿಯಿರುವಂತೆ I ಅನುಗ್ರಹಿಸೆನಗೆ ನೀ ಏಕಾಗ್ರತೆಯನು II

12ಮಾಡುವೆ ದೇವಾ, ನಿನ್ನ ಗುಣಗಾನವನು ಶ್ರದ್ಧೆಯಿಂದ I ಘನಪಡಿಸುವೆ ಸ್ವಾಮಿ, ನಿನ್ನ ಶ್ರೀನಾಮವನು ಅನವರತ II

13ನೀನೆನಗೆ ತೋರಿಸಿರುವ ಕರುಣೆ ಮಹತ್ತರವಾದುದಯ್ಯಾ I ಪಾತಾಳದಿಂದ ನನ್ನ ಪ್ರಾಣವನು ಉಳಿಸಿದೆಯಯ್ಯಾ II

14ಗರ್ವಿಗಳೆದ್ದಿಹರು ದೇವಾ, ನನ್ನ ವಿರುದ್ಧವಾಗಿ I ನನ್ನ ಪ್ರಾಣಕೆ ಕಾದಿಹರು ಕ್ರೂರಿಗಳು ಗುಂಪಾಗಿ I ಕಾಣುತ್ತಿಹರವರು ನಿನ್ನನು ಪ್ರಭು, ಅಲಕ್ಷ್ಯವಾಗಿ II

15ಪ್ರಭು, ನೀ ದಯಾಳು, ದೇವಾ ನೀ ಕರುಣಾಮೂರ್ತಿ I ಸಹನಶೀಲನು, ಸತ್ಯಸ್ವರೂಪಿ, ಪ್ರೇಮಮೂರ್ತಿ II

16ಕಟಾಕ್ಷವಿಟ್ಟು ಕರುಣಿಸೆನ್ನನು I ನೀಡು ನಿನ್ನ ದಾಸನಿಗೆ ಬಲವನು I ರಕ್ಷಿಸು ನಿನ್ನ ದಾಸಿಯ ಮಗನನು II

17ನಿನ್ನ ನೆರವು, ಸಾಂತ್ವನ, ನನಗಿದೆಯೆಂದು I ನೀಡೊಂದು ಪ್ರಭು, ಶುಭಸೂಚನೆಯನು I ಅದನೋಡಿ ಶತ್ರು ಪಡಲಿ ಲಜ್ಜೆಯನು II