ಹಳೆಯ ಒಡಂಬಡಿಕೆKNCL

ಕೀರ್ತನೆಗಳು 83

1ಮಾತನಾಡದೆ ದೇವಾ, ಸುಮ್ಮನಿರಬೇಡ I ಮೌನದಿಂದ ಸ್ವಾಮೀ, ನಿಶ್ಚಿಂತನಿರಬೇಡ II

2ದಂಗೆಯೆದ್ದಿಹರಿದೋ ನಿನ್ನ ಶತ್ರುಗಳು I ತಲೆಯೆತ್ತಿಕೊಂಡಿಹರು ನಿನ್ನ ದ್ವೇಷಿಗಳು II

3ಕುತಂತ್ರಮಾಡುತಿಹರು ನಿನ್ನ ಪ್ರಜೆಗೆ ವಿರುದ್ಧ I ಆಲೋಚಿಸುತಿಹರು ನಿನ್ನ ಶರಣರಿಗೆ ವಿರುದ್ಧ II

4ಇಂತೆನ್ನುತಿಹರು : “ಬನ್ನಿ ಸಂಹರಿಸೋಣ I ಆತನ ಜನಾಂಗ ಉಳಿಯದಂತೆ ಮಾಡೋಣ I ಇಸ್ರಯೇಲೆಂಬ ನಾಮವನಳಿಸಿಬಿಡೋಣ” II

5ಎದೋಮ್ಯರ ಪಾಳೆಯದವರು ಇಷ್ಮಾಯೇಲ್ಯರು, I ಗೇಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, II

6ಮೊವಾಬ್ಯ, ಹಗ್ರೀಯ, ಫಿಲಿಷ್ಟಿಯ, ಟೈರ್ ಜನರು I ಒಮ್ಮತದಿಂದಿವರೆಲ್ಲರು ಒಟ್ಟುಗೂಡಿಹರು I ನಿನ್ನ ವಿರುದ್ಧವಾಗಿ ಒಳಸಂಚು ಮಾಡಿಹರು II

8ಇವರೊಡನೆ ಕೂಡಿಕೊಂಡಿಹ ಅಸ್ಸೀರ್ಯರು I ಲೋಟನ ವಂಶಕ್ಕೆ ಭುಜಬಲವಾಗಿಹರು II

9ಮಾಡವರಿಗೆ ಪ್ರಭೂ, ನೀ ಮಿದ್ಯಾನ್ಯರಿಗೆ ಮಾಡಿದಂತೆ I ಕಿಷೋನ್ ನದಿಯ ಬಳಿ ಸೀಸೆರ್‍ಯಾಬೀನರಿಗೆ ಮಾಡಿದಂತೆ II

10ಎಂದೋರಿನಲ್ಲವರು ಕೊಲೆಯಾದರು I ಹೊಲಗದ್ದೆಗಳಿಗೆ ಗೊಬ್ಬರವಾದರು II

11ಒರೆಬ್, ಜೇಬ್ ಎಂಬವರ ಗತಿಯೊದಗಲಿ ಇವರ ಸಿರಿವಂತರಿಗೆ I ಜೇಬಹ, ಚೆಲ್ಮುನ್ನರ ಪಾಡು ಬರಲಿರುವ ಸಕಲ ರಾಜರಿಗೆ I “ಬನ್ನಿ, ದೇವರ ನಾಡುಬೀಡನು ಆಕ್ರಮಿಸೋಣ” ಎಂದವರಿಗೆ II

13ಮಾಡಿವರನು ದೇವಾ, ಗಾಳಿಗೆ ತೂರುವ ಹೊಟ್ಟಿನಂತೆ I ಸುಂಟರಗಾಳಿಯಲಿ ಮೇಲೇಳುವ ದೂಳೀಪಟದಂತೆ II

14ಕಾಡುಮೇಡನು ಸುಡುವಾ ಬೆಂಕಿಯಂತೆ I ಪರ್ವತವನೆ ಉರಿಸುವ ಜ್ವಾಲೆಯಂತೆ II

15ಓಡಿಸೋಡಿಸವರನು ನೀ ಬೀಸುವ ಬಿರುಗಾಳಿಗೆ I ಗುರಿಪಡಿಸವರನು ನಿನ್ನಾ ಚಂಡಮಾರುತಕೆ II

16ಕವಿಯಲಿ ಅವಮಾನ ನಿಂದೆ ಇವರ ಮುಖವನು I ಅರಸುವರಾಗ ಪ್ರಭೂ, ನಿನ್ನ ಸಿರಿನಾಮವನು II

17ಕಳವಳಗೊಳ್ಳಲಿ ಅವರು ಸತತವು ಲಜ್ಜೆಯಿಂದ I ಅವರಳಿದುಹೋಗಲಿ ಅವಮಾನ ನಿಂದೆಗಳಿಂದ II

18ಇವರು ಅರಿಯಲಿ ಪ್ರಭುವೆಂಬ ನಾಮ ನಿನ್ನದೆಂದು I ಧರೆಯಲ್ಲೆಲ್ಲಾ ಸರ್ವೋನ್ನತ ನೀನೇ ಎಂದು II