ಹಳೆಯ ಒಡಂಬಡಿಕೆKNCL

ಕೀರ್ತನೆಗಳು 81

1ಹಾಡಿರಿ ಶುಭಗೀತೆಯನು ಬಲಪ್ರದನಾದ ದೇವನಿಗೆ I ಮಾಡಿರಿ ಜಯಜಯಕಾರವನು ಯಕೋಬ ಕುಲದೇವನಿಗೆ II

2ಆರಂಭಿಸಿ ಸಂಗೀತವನು, ಬಾರಿಸಿ ಮೃದಂಗವನು I ನುಡಿಸಿರಿ ಮಧುರ ವೀಣೆಯನು, ಸ್ವರಮಂಡಲವನು II

3ಊದಿರಿ ಕೊಂಬನು ಅಮವಾಸ್ಯೆಯಲಿ I ಉತ್ಸವದಿನವಾದ ಪೂರ್ಣಿಮೆಯಲಿ II

4ದೇವರಿತ್ತ ನಿಯಮವದು ಯಕೋಬ್ಯರಿಗೆ I ಕೊಟ್ಟಕಟ್ಟಳೆಯದು ಇಸ್ರಯೇಲರಿಗೆ II

5ಈಜಿಪ್ಟರಿಗೆದುರಾಗಿ ತೆರಳಿದಂದು I ಜೋಸೆಪ್ಯರಿಗಾತ ವಿಧಿಸಿದಾಜ್ಞೆಯದು II

6ಅಪರಿಚಿತ ವಾಣಿಯೊಂದು ನುಡಿಯಿತೀ ಮಾತನು : I “ತಪ್ಪಿಸಿದೆ ನಾನು ಹೆಗಲಮೇಲೆ ನೀ ಹೊರೆಹೊರುವುದನು I ಬಿಡುಗಡೆ ಮಾಡಿದೆ ಗೂಡೆಯೆತ್ತುವ ಕೈಗಳನು II

7“ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ ನಿನ್ನನು I ಗುಡುಗುವ ಮೇಘದಿಂದ ಕೊಟ್ಟೆ ನಿನಗೆ ಸದುತ್ತರವನು I ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ ನಿನ್ನನು, II

8“ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ I ಹಾಗೆ ಮಾಡಿದರೆ ಇಸ್ರಯೇಲರೆ, ಹಿತ ನಿಮಗೆ, II

9“ಇರಬಾರದು ಅನ್ಯದೇವತೆಗಳು ನಿಮ್ಮಲಿ I ಪರದೇವತೆಗಳ ಪೂಜೆ ಕೂಡದು ನಿಮ್ಮಲಿ, II

10“ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು I ತೆರೆಯಿರಿ ನಿಮ್ಮ ಬಾಯನು, ತುಂಬಿಸಿ ತೃಪ್ತಿಪಡಿಸುವೆ ನಾನದನು II

11“ಆದರೆ ಕೇಳಲಿಲ್ಲಾ ಜನತೆ ನನ್ನ ಮಾತುಗಳನು I ತೋರಲಿಲ್ಲ ಇಸ್ರಯೇಲರು ನನಗೆ ವಿಧೇಯತೆಯನು, II

12“ಎಂತಲೇ ಕೈಬಿಟ್ಟೆ ಅವರನು ಹಟಮಾರಿಗಳೆಂದು I ತಮಗಿಷ್ಟಬಂದಂತೆಯೆ ನಡೆದುಕೊಳ್ಳಲಿಯೆಂದು, II

13“ಒಳಿತಾಗಿರುತ್ತಿತ್ತು ನನ್ನ ಜನರು ನನಗೆ ಕಿವಿಗೊಟ್ಟಿದ್ದರೆ I ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ ಹಿಡಿದಿದ್ದರೆ, II

14“ಅಡಗಿಸುತ್ತಿದ್ದೆ ಅವರ ಶತ್ರುಗಳನು ಸುಲಭವಾಗಿ I ಸದೆಬಡಿಯುತ್ತಿದ್ದೆ ಅವರ ವೈರಿಗಳನು ಸರಿಯಾಗಿ, II

15“ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು ಅವರ ಮುಂದೆ I ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ ದಂಡನೆ ಮುಗಿವಿಲ್ಲದೆ, II

16“ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು I ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” II