ಹಳೆಯ ಒಡಂಬಡಿಕೆKNCL

ಕೀರ್ತನೆಗಳು 80

1ಕಿವಿಗೊಟ್ಟು ಆಲಿಸೋ, ಇಸ್ರಯೇಲರ ಮೇಷಪಾಲನೇ I ಜೋಸೆಫನ ವಂಶಜರನು ಕುರಿಹಿಂಡಂತೆ ಕರೆತಂದವನೇ I ವಿರಾಜಿಸು, ಕೆರೂಬಿಯರ ಮಧ್ಯೆ ಆಸೀನನಾದವನೇ II

2ಶೋಭಿಸು ಎಫ್ರಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ I ತೋರ್ಪಡಿಸು ನಿನ್ನ ಶೌರ್ಯವನು, ಬಂದು ಜಯಪ್ರದನಾಗು ನಮಗೆ II

3ಎಲೈ ದೇವನೇ, ಪುನರುದ್ಧಾರ ಮಾಡೆಮ್ಮನು I ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು II

4ಸ್ವಾಮಿ ದೇವನೇ, ಸರ್ವಶಕ್ತನೆ I ಅದೆನಿತು ಕಾಲ ನೀ ಮುನಿದಿರುವೆ I ನಿನ್ನವರ ಮೊರೆಯನಾಲಿಸದಿರುವೆ? II

5ರೋದನವನೆ ಅವರಿಗೆ ಅನ್ನವಾಗಿಸಿದೆ I ಹರಿಯುವ ಕಂಬನಿಯನೆ ಪಾನವಾಗಿಸಿದೆ II

6ನೆರೆಯವರಿಗೆ ನಮ್ಮನು ಕಲಹ ಕಾರಣವಾಗಿಸಿದೆ I ಶತ್ರುಗಳ ಅಪಹಾಸ್ಯಕೆ ನಮ್ಮನು ಗುರಿಪಡಿಸಿದೆ II

7ಸರ್ವಶಕ್ತನಾದ ದೇವನೆ, ಉದ್ಧರಿಸೆಮ್ಮನು I ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು II

8ಈಜಿಪ್ಟಿನಿಂದ ದ್ರಾಕ್ಷಾಲತೆಯೊಂದನು ನೀ ತಂದೆ I ಅನ್ಯಜನತೆಯನು ಹೊರದೂಡಿ ಅದನು ನಾಟಿಮಾಡಿದೆ II

9ಹದಮಾಡಿದೆ ಅದಕೆ ಬೇಕಾದ ನೆಲವನ್ನೆಲ್ಲಾ I ಬೇರೂರಿ ಹಬ್ಬಿಕೊಂಡಿತದು ನಾಡಿನಲ್ಲೆಲ್ಲಾ II

10ಬೆಟ್ಟಗುಡ್ಡಗಳನಿದೋ ಕವಿದಿದೆ ಅದರ ಕುಡಿಗಳು I ದೇವದಾರು ಮರಗಳ ಮೇಲೆ ಹಬ್ಬಿವೆ ಬಳ್ಳಿಗಳು II

11ಹರಡಿವೆ ಅದರ ಕೊಂಬೆಗಳು ಸಮುದ್ರದವರೆಗೆ I ಬೆಳೆದಿವೆ ಆ ರೆಂಬೆಗಳು ಮಹಾನದಿಯವರೆಗೆ II

12ಕಿತ್ತುಹಾಕಿದೆಯೇಕೆ ಅದರ ಬೇಲಿಯನು? I ತರಿದುಬಿಡುವವರಲ್ಲವೆ ದಾರಿಗರು ಅದನು? II

13ನಾಶಮಾಡುವುವು ಅದನು ಕಾಡುಹಂದಿಗಳು I ತಿಂದುಹಾಕುವುವು ಅದನು ಅರಣ್ಯಮೃಗಗಳು II

14ಸರ್ವಶಕ್ತನಾದ ದೇವರೇ, ಮರಳಿ ಮುಖತೋರಿಸು I ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು ಪರಾಮರಿಸು II

15ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು I ಕಾದಿರಿಸು ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು II

16ಅದನು ಬೆರಣಿಯಂತೆ ಸುಟ್ಟುಹಾಕಿದವರಾದರೋ I ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು II

17ಕೈ ಹಿಡಿದು ಕಾಪಾಡು ನಿನ್ನ ಬಲಗೈ ಉದ್ಧರಿಸಿದ ಪುರುಷನನು I ನಿನಗೆಂದೇ ನೀ ಸಾಕಿ ಬೆಳೆಸಿದಾ ವರಪುತ್ರನನು II

18ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು ನಿನ್ನನು I ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ ನಾಮಸ್ಮರಣೆಯನು II

19ಸರ್ವಶಕ್ತನಾದ ದೇವನೆ, ಉದ್ಧರಿಸು ನಮ್ಮನು I ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು II