ಹಳೆಯ ಒಡಂಬಡಿಕೆKNCL
1ನಿನ್ನಾಶ್ರಯವನರಸಿ ಹೇ ಸ್ವಾಮಿ ದೇವಾ, ನಾ ಬಂದಿಹೆನು I ಬೆನ್ನಟ್ಟಿ ಬರುವವರ ಕೈಯಿಂದ ತಪ್ಪಿಸಿ, ಕಾಪಾಡೆನ್ನನು II
2ಇಲ್ಲದಿರೆ ಶತ್ರು ತಿಳಿದಾನು ನನಗೆ ರಕ್ಷಕನಿಲ್ಲವೆಂದು I ಝಲ್ಲನೆ ಸೀಳಿಬಿಟ್ಟಾನು ಸಿಂಹದಂತೆ ಮೇಲೆಬಿದ್ದು II
3ಸ್ವಾಮಿ ದೇವಾ, ನಾನೀಪರಿ ನಡೆದಿರೆ : ಅಕ್ರಮಕ್ಕೆ ಕೈ ಹಾಕಿರೆ I ಮಿತ್ರದ್ರೋಹಿ ಆಗಿರೆ, ನಿಷ್ಕಾರಣ ಶತ್ರು ಸುಲಿಗೆ ಮಾಡಿರೆ II
5ಎನ್ನ ಬೆನ್ನಟ್ಟಿ ಬರಲಿ ವೈರಿ, ಕಾಲಿಂದೆನ್ನ ಮೆಟ್ಟಿ ತುಳಿಯಲಿ I ಎನ್ನ ಮಾನವನು ಮಣ್ಣುಪಾಲಾಗಿಸಲಿ, ನನ್ನನು ಸೋಲಿಸಿಬಿಡಲಿ II
6ಹೇ ಪ್ರಭು, ಎಚ್ಚರಗೊಳ್ಳು : ನ್ಯಾಯವನು ದೇವಾ, ನಿರ್ಣಯಿಸು I ಕೋಪದಿಂದೆದ್ದು ವಿರೋಧಿಗಳ ಕ್ರೋಧವನು ಭಂಗಪಡಿಸು II
7ಸಭೆ ಸೇರಲಿ ಸಕಲ ಜನಾಂಗಗಳು ನಿನ್ನ ಸುತ್ತಲು I ನೀ ಆಸ್ಥಾನವನೇರು, ಅವರನು ಪರಿಪಾಲಿಸಲು II
8ಹೇ ಪ್ರಭು, ಜಗದ ಜನಾಂಗಕೆ ನ್ಯಾಯ ದೊರಕಿಸುವವನು ನೀನು I ನನಗೂ ನ್ಯಾಯ ದೊರಕಿಸು : ನಿರಪರಾಧಿ, ನೀತಿವಂತ ನಾನು II
9ಮಾನವರ ಹೃನ್ಮನವನರಿತಿಹ ಸತ್ಯಸ್ವರೂಪಿ ದೇವಾ, I ದುರುಳರ ಕೆಡುಕನಳಿಸಯ್ಯಾ, ಸತ್ಯವಂತರನು ನೀ ಉಳಿಸಯ್ಯಾ II
10ನನಗೆ ರಕ್ಷೆ ನೀಡುವ ಗುರಾಣಿ, ದೇವನೇ I ನೇರಮನಸ್ಕರಿಗೆ ಸಂರಕ್ಷಣೆ ಆತನೆ II
11ನ್ಯಾಯಕ್ಕನುಸಾರ ತೀರ್ಪನೀಡುವಂಥವನು ದೇವನು I ದುರುಳರ ಮೇಲೆ ದಿನಬಿಡದೆ ಕೋಪವುಳ್ಳವನು ಆತನು II
12ತೀಡುವನು ಕತ್ತಿಯನು, ಹೂಡುವನು ಬಾಣವನು I ಪಡೆಯದಿರೆ ದುರುಳನು ಮನಪರಿವರ್ತನೆಯನು II
13ಸೇರಿಸಿಟ್ಟಿರುವನಾತ ಮಾರಕಾಸ್ತ್ರಗಳನು I ಗುರಿಯಿಟ್ಟು ನಿಂತಿರುವನು ಅಗ್ನಿಬಾಣಗಳನು II
14ಕೇಡನು ಹಡೆಯಲು ದುರುಳನು ಪಡುವ ಬೇನೆಯನು ನೋಡು I ಹಾನಿಯ ಹಡೆವನೆಂದೆಣಿಸಿ ಶೂನ್ಯವ ಹೆರುವುದ ನೋಡು II
15ಗುಣಿಯನು ತೋಡಿದನು; ಮಣ್ಣನು ಹೊರದೂಡಿದನು I ತೋಡಿದ ಗುಣಿಯಲಿ ತಾನೆ ತಟ್ಟನೆ ಬೀಳುವನು II
16ತಾನು ಮಾಡಿದ ಕುತಂತ್ರ ತನ್ನ ತಲೆಗೆ ಗಂಡಾಂತರ I ತಾನು ಕೊಟ್ಟ ಉಪದ್ರವ ತನ್ನ ಬುರುಡೆಗೆ ಅವಾಂತರ II
17ಸತ್ಯಸ್ವರೂಪನಾದ ಸ್ವಾಮಿಗೆ ನನ್ನ ವಂದನೆ I ಪರಾತ್ಪರ ಪ್ರಭುವಿನ ನಾಮಕ್ಕೆ ಸ್ತುತಿಸಂಕೀರ್ತನೆ II