ಹಳೆಯ ಒಡಂಬಡಿಕೆKNCL
1ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ I ಗಮನಕೊಡಿ ನಾ ಹೇಳುವ ಮಾತುಗಳಿಗೆ II
2ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು I ಹೊರಪಡಿಸುವೆನು ಪೂರ್ವಕಾಲದ ಗೂಡಾರ್ಥಗಳನು II
3ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ I ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ I ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ II
4ಮರೆಮಾಡೆವು ಅವರ ಸಂತತಿಯಾದ ನಿಮಗೆ I ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II
5ನೇಮವಿತ್ತನು ಯಕೋಬವಂಶಕೆ I ಶಾಸನಕೊಟ್ಟನು ಇಸ್ರಯೇಲರಿಗೆ II ವಿಧಿಸಿದ ನಿಂತು ನಮ್ಮ ಪೂರ್ವಜನರಿಗೆ I “ಕಲಿಸಿರಿ ಇವನ್ನು ನಿಮ್ಮ ಮಕ್ಕಳಿಗೆ” II
6“ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ I ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” II
7ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು I ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು II
8ಮರೆಯರು ನನ್ನ ಮಹತ್ಕಾರ್ಯಗಳನು I ಇಡುವರು ನನ್ನಲ್ಲೇ ಭರವಸೆಯನು I ಕೈಗೊಳ್ಳುವರು ನನ್ನ ಆಜ್ಞೆಗಳನು II
9ಎಫ್ರಯಿಮರು ಹೋದರು ಧನುರ್ಧಾರಿಗಳಾಗಿ I ಯುದ್ಧವೇಳೆಯಲಿ ಓಡೋಡಿದರು ಹಿಂದಿರುಗಿ II
10ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು I ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು II
11ಮರೆತುಬಿಟ್ಟರವರು ಆತನ ಮಹತ್ಕಾರ್ಯಗಳನು I ತಮ್ಮೆದುರಿನಲ್ಲೇ ಸಾಧಿಸಿದ ಅದ್ಭುತಗಳನು : II
12ಆ ಈಜಿಪ್ಟ್ ದೇಶದೊಳು, ಸೋನ್ ಬಯಲು ಸೀಮೆಯೊಳು I ಆತನೆಸಗಿದ ಪವಾಡಗಳು ಪೂರ್ವಜರ ಇದಿರೊಳು II
13ದಾಟಿಸಿದನವರನು ಸಮುದ್ರವನೆ ಭೇದಿಸಿ I ಅದರತುಳ ನೀರನು ರಾಶಿಯಾಗಿ ನಿಲ್ಲಿಸಿ II
14ಹಗಲಲಿ ಕರೆದೊಯ್ದನು ಮೇಘದ ನೆರಳಲಿ I ಇರುಳೊಳು ನಡೆಸಿದನು ಜ್ವಾಲೆಯ ಬೆಳಕಲಿ II
15ಕಾಡಿನಾ ಕಗ್ಗಲ್ಲನು ಸೀಳಿ ಹೊರಡಿಸಿದನು ನೀರನು I ಆಳದ ಸರಸಿಯಿಂದೊ ಎಂಬಂತೆ ಅದನು ಕುಡಿಯಲಿತ್ತನು II
16ಬಂಡೆಗಳಿಂದಲೆ ಹೊರಡಿಸಿದನು ನೀರನು I ನದಿಗಳಂತೆಯೆ ಹರಿಯಮಾಡಿದನು ಅದನು II
17ಆದರೂ ಪಾಪಮಾಡುತ್ತಲೆ ಬಂದರು ದೇವರಿಗೆದುರಾಗಿ I ಪ್ರತಿಭಟಿಸಿದರು ಅಡವಿಯಲಿ ಪರಾತ್ಪರನಿಗೆ ವಿರುದ್ಧವಾಗಿ II
18ಕೋರಿದರು ತಮಗಿಷ್ಟವಾದ ಆಹಾರವನೇ I ಪರೀಕ್ಷಿಸಿದರು ಮನದಲಿ ಆ ದೇವರನೇ II
19ಜರೆವ ಮಾತಿನಲಿ ಆಡಿಕೊಂಡರಿಂತು : I “ಅಡವಿಯಲ್ಲಿ ದೇವನೂಟ ಬಡಿಸುವನೆಂತು?” II
20“ಹೊಡೆದನು ಆಸರೆಯನು, ಚಿಮ್ಮಿತು ನೀರು, ಹರಿಯಿತು ನೆರೆಯು I ಆದರೆ ಕೊಡಬಲ್ಲನೆ ರೊಟ್ಟಿ, ಒದಗಿಸುವನೆ ಮಾಂಸವನು?” II
21ಇದನ್ನು ಕೇಳಿ ಸಿಡಿದೆದ್ದನು ಪ್ರಭು ರೋಷದಿಂದಲೆ I ಉಕ್ಕೇರಿತಾತನ ಕೋಪ ಇಸ್ರಯೇಲರ ಮೇಲೆ I ಕಾರಿದನು ಕೋಪಾಗ್ನಿಯನು ಯಕೋಬಕುಲದ ಮೇಲೆ II
22ಏಕೆನೆ, ಅವರಿಗಿರಲಿಲ್ಲ ವಿಶ್ವಾಸ ದೇವರಲಿ I ಇರಲಿಲ್ಲ ನಂಬಿಕೆ ಆತನಾ ಸಲಹುವ ಶಕ್ತಿಯಲಿ II
23ಆದರು ಮೇಘಮಂಡಲಕೆ ಆಜ್ಞೆಯಿತ್ತನಾತ I ಅಂತರಿಕ್ಷದಾ ದ್ವಾರಗಳನು ತೆರೆದನಾತ II
24ಸುರಿಸಿದನು ಅವರ ಮೇಲೆ ಉಣಲು ಅನ್ನವನು I ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು II
25ನರರಿಗುಣಲುಕೊಟ್ಟನು ದೇವದೂತರ ಆಹಾರವನು I ಇತ್ತನವರಿಗೆ ತೃಪ್ತಿಕರವಾದ ಭೂರಿ ಔತಣವನು II
26ಆಕಾಶದಲೆಬ್ಬಿಸಿದನು ಮೂಡಣ ಗಾಳಿಯನು I ಒಲುಮೆಯಿಂದ ಹೊರಡಿಸಿದನು ತೆಂಕಣ ಗಾಳಿಯನು II
27ಧೂಳಿನಷ್ಟು ಸುರಿಸಿದನು ಮಾಂಸವೃಷ್ಟಿಯನು I ಸಮುದ್ರದ ಮರಳಿನಷ್ಟು ರೆಕ್ಕೆ ಹಕ್ಕಿಗಳನು II
28ಬೀಳ್ವಂತೆ ಮಾಡಿದನು ಪಾಳೆಯದ ಮಧ್ಯದಲೂ I ಉದುರಿದವು ಅವರಿದ್ದ ಗುಡಾರಗಳ ಸುತ್ತಲೂ II
29ಸಿಕ್ಕಿತು ಅವರಿಗೆ ತಾವು ಬಯಸಿದ್ದು I ತೃಪ್ತರಾದರು ಹೊಟ್ಟೆತುಂಬ ತಿಂದು II
30ಆದರೆ ಆ ಜನಕೆ ಆಶೆ ಕೈಗೂಡುವುದಕೆ ಮುನ್ನ I ಬಾಯಿಗೆ ಬಂದ ತುತ್ತು ಹೊಟ್ಟೆಗಿಳಿಯುವುದಕ್ಕೆ ಮುನ್ನ II
31ದೈವಕೋಪವೆದ್ದಿತು ಅವರಿಗೆ ವಿರುದ್ಧ I ಮಾಡಿತವರಲಿ ಕೊಬ್ಬಿದವರ ವಧ I ನೆಲಕುರುಳಿತು ಇಸ್ರಯೇಲ ಸಿರಿಜನ II
32ಇಷ್ಟಾದರೂ ಪಾಪಮಾಡುತ ಬಂದವರು ಪದೇ ಪದೇ I ದೇವರ ಅದ್ಭುತಕಾರ್ಯಗಳನು ತೊರೆದರು ನಂಬದೆ II
33ಆರಿಸಿದನು ಊದಿ ಅವರ ಬಾಳ ಹಣತೆಯನು I ಬರಮಾಡಿದನು ಅವರಿಗೆ ಭೀಕರ ಮರಣವನು II
34ಆತನನು ನೆನಸಿಕೊಂಡರವರು ವಧೆಯಾಗುವಾಗ I ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ II
35ನೆನೆದರಾಗ ದೇವರೇ ತಮಗಾಶ್ರಯ ದುರ್ಗವೆಂದು I ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು II
36ಆದರೆ ಅವರ ನಾಲಿಗೆಯಾಡಿತು ಅಸತ್ಯ I ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ II
37ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ I ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ II
38ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ I ಕೋಪವ ತಾಳಿಕೊಂಡನು ಹಲವು ವೇಳೆ, ಉದ್ರೇಕಗೊಳ್ಳದೆ II
39ನೆನೆದುಕೊಂಡನಾತ ಅವರು ಕೇವಲ ನರರೆಂದು I ತಿಳಿದುಕೊಂಡನು ಮರಳಿಬಾರದ ಉಸಿರವರೆಂದು II
40ಎಷ್ಟೋ ಸಾರಿ ಅವಿಧೇಯರಾಗಿ ನಡೆದುಕೊಂಡರು ಅರಣ್ಯದಲಿ I ಎಷ್ಟೋ ಸಾರಿ ಆತನ ಮನನೋಯಿಸಿದರು ಮರುಭೂಮಿಯಲಿ II
41ಪದೇಪದೇ ಪರೀಕ್ಷಿಸಿದರು ದೇವರನು I ಕೆಣಕಿದರು ಇಸ್ರಯೇಲರ ಸದಮಲನನು II
42ಮರೆತೇಬಿಟ್ಟರು ಆತನ ಭುಜಬಲವನು I ವೈರಿಗಳಿಂದ ಬಿಡುಗಡೆಯಾದಾ ಸಮಯವನು II
43ಕಡೆಗಣಿಸಿದರು ಈಜಿಪ್ಟಿನಲಿ ಮಾಡಿದ ಪವಾಡಗಳನು I ಸೋನ್ ಬಯಲು ಸೀಮೆಯಲಾತ ಮಾಡಿದ ಮಹತ್ಕಾರ್ಯಗಳನು II
44ಅಲ್ಲಿ ಆತ ರಕ್ತವಾಗಿಸಿದನು ನದಿನೀರನು I ಕುಡಿಯಲಾಗದಂತೆ ಮಾಡಿದನಾ ತೊರೆನೀರನು II
45ಕಳುಹಿಸಿದನು ವಿನಾಶಕರ ಹುಳುಗಳನು I ಹಾಳುಮಾಡುವ ವಿಷಮಂಡೂಕಗಳನು II
46ಬಿಟ್ಟನು ಬೆಳೆಗಳನು ಚಿಟ್ಟೆಗಳಿಗೆ I ಕಷ್ಟದ ಫಲಗಳನು ಮಿಡತೆಗಳಿಗೆ II
47ದ್ರಾಕ್ಷಾಲತೆಗಳನು ಹಾಳುಮಾಡಿದನು ಆಲಿಕಲ್ಲಿನಿಂದ I ಅವರ ಅತ್ತಿಮರಗಳನು ನಾಶಮಾಡಿದನು ಕಲ್ಮಳೆಯಿಂದ II
48ಅವರ ದನಕರುಗಳನೊಪ್ಪಿಸಿದ ಕಲ್ಮಳೆಗೆ I ಅವರ ಕುರಿಮಂದೆಗಳನೊಪ್ಪಿಸಿದ ಸಿಡಿಲಿಗೆ II
49ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು I ಕಳಿಸಿದನವರ ಮೇಲೆ ಸಂಹಾರಕ ದೂತಗಣಗಳನು II
50ತೂಬೆತ್ತಿಬಿಟ್ಟನು ತನ್ನ ಕ್ರೋಧಕೆ I ತುತ್ತಾಗಿಸಿದನು ದೇಹಗಳನು ಜಾಡ್ಯಕೆ I ಅಡ್ಡಿತರಲಿಲ್ಲ ಆತನು ಅವರ ಮರಣಕೆ II
51ಸಂಹರಿಸಿದನು ಈಜಿಪ್ಟಿನ ಚೊಚ್ಚಲ ಮಕ್ಕಳನು I ಹಾಮನ ಮನೆತನದ ಮೊತ್ತಮೊದಲ ಸಂತಾನವನು II
52ತನ್ನ ಜನರನ್ನೋ ಹೊರತಂದನು ಕುರಿಮಂದೆಯಂತೆ I ಅಡವಿಯೊಳು ಪರಿಪಾಲಿಸಿದನು ಕುರಿಗಾಹಿಯಂತೆ II
53ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ I ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ II
54ಕರೆತಂದನವರನು ತನ್ನ ಪವಿತ್ರನಾಡಿಗೆ I ಭುಜಬಲದಿಂದ ಗಳಿಸಿದಾಪರ್ವತ ಸೀಮೆಗೆ II
55ಓಡಿಸಿದನು ಅವರಿಗೆದುರಾಗಿದ್ದ ಜನಾಂಗಗಳನು I ಸೊತ್ತಾಗಿ ಹಂಚಿದನು ಇಸ್ರಯೇಲರಿಗಾ ನಾಡನು I ನೆಲೆಗೊಳಿಸಿದನಾ ಜನಾಂಗದ ಬಿಡಾರದಲಿ ಇವರನು II
56ಆದರೂ ಬಂಡೆದ್ದು ಪರೀಕ್ಷಿಸಿದರು ಪರಾತ್ಪರ ದೇವರನು I ಕೈಗೊಂಡು ನಡೆಯದೆ ಹೋದರು ಆತನ ವಿಧಿನಿಯಮಗಳನು II
57ನಂಬಿಕೆಗೆಟ್ಟ ದ್ರೋಹಿಗಳಾದರು ತಮ್ಮ ಹಿರಿಯರಂತೆ I ಆತನಿಗೆ ಎದುರುಬಿದ್ದರು ಹಿಮ್ಮುಖವಾದ ಬಿಲ್ಲಿನಂತೆ II
58ಬೇಸರಗೊಳಿಸಿದರು ತಮ್ಮ ಪೂಜಾಸ್ಥಾನಗಳಿಂದ I ರೇಗಿಸಿದರಾತನನು ಕೆತ್ತನೆಯ ವಿಗ್ರಹಗಳಿಂದ II
59ರಣರೌದ್ರನಾದನು ಇದನರಿತ ದೇವನು I ತೊರೆದನು ಅಸಹ್ಯದಿಂದ ಇಸ್ರಯೇಲರನು II
60ತ್ಯಜಿಸಿದನು ಸಿಲೋವಿನಲಿ ತನಗಿದ್ದ ಆಲಯವನು I ಜನರ ಮಧ್ಯೆ ವಾಸಿಸಲು ತನಗಿದ್ದಾ ಗುಡಾರವನು II
61ಒಪ್ಪಿಸಿದನು ತನ್ನ ಬಲುಮೆಯನು ಕೈಸೆರೆಗೆ I ತನ್ನ ಮಹಿಮೆಯನು ವಿರೋಧಿಗಳ ಕೈವಶಕೆ II
62ಗುರಿಮಾಡಿದನು ತನ್ನ ಪ್ರಜೆಯನು ಖಡ್ಗಕೆ I ಉಗ್ರವಾದನು ತನ್ನ ವಾರಸುದಾರರಿಗೆ II
63ಆಹುತಿಯಾದರವರ ಯುವಜನ ಅಗ್ನಿಗೆ I ವಿವಾಹವಾಗಲಿಲ್ಲ ಅವರ ಕನ್ಯೆಯರಿಗೆ II
64ಬಲಿಯಾದರವರ ಯಾಜಕರು ಶತ್ರುಕತ್ತಿಗೆ I ವಿಧವೆಯರು ರೋದಿಸಲಿಲ್ಲ ಅವರ ಸಾವಿಗೆ II
65ಪ್ರಭುವೆದ್ದನು ನಿದ್ರೆಯಿಂದಲೋ ಎಂಬಂತೆ I ಮಧುವಿನ ಅಮಲಿನಿಂದೆಚ್ಚೆತ್ತ ಬಲಿಷ್ಠನಂತೆ II
66ಸದೆಬಡಿದನಾತ ತನ್ನ ಶತ್ರುಗಳನು I ನಿತ್ಯನಿಂದೆಗೆ ಈಡುಮಾಡಿದನವರನು II
67ವರ್ಜಿಸಿದನು ಜೋಸೆಫ್ ಕುಲದ ಗುಡಾರವನು I ತ್ಯಜಿಸಿದನು ಎಫ್ರಯಿಮ್ ಕುಲದಾ ಗುಡಾರವನು II
68ಆರಿಸಿಕೊಂಡನು ಯೆಹೂದರ ಗೋತ್ರವನು I ತನಗತಿಪ್ರಿಯವಾದ ಸಿಯೋನ್ ಗಿರಿಯನು II
69ನಿರ್ಮಿಸಿದನು ತನ್ನ ಮಂದಿರವನು ಪರ್ವತದಂತೆ I ಶಾಶ್ವತವಾಗಿ ತಾನು ಸ್ಥಾಪಿಸಿದ ಭೂಮಿಯಂತೆ II
70ಆರಿಸಿಕೊಂಡನು ದಾಸ ದಾವೀದನನು I ತೆಗೆದುಕೊಂಡನು ಕುರಿಹಟ್ಟಿಯಿಂದವನನು II
71ಕುರಿಮೇಯಿಸುವಾ ಕಸಬಿನಿಂದವನನು ಬಿಡಿಸಿದನು I ಸ್ವಪ್ರಜೆ ಯಕೋಬ್ಯರನು, ಸ್ವಜನ ಇಸ್ರಯೇಲರನು I ಪರಿಪಾಲಿಸುವಂತೆ ನೇಮಕ ಮಾಡಿದನು ಆತನನು II
72ದಾವೀದನು ಪೋಷಿಸಿದನವರನು ನೇರ ಮನದಿಂದ I ಪರಿಪಾಲಿಸಿದನವರನು ರಾಜ್ಯಾಧಿಕಾರ ಕುಶಲತೆಯಿಂದ II