ಹಳೆಯ ಒಡಂಬಡಿಕೆKNCL
1ಮೊರೆಯಿಡುವೆನು, ಕೂಗಿ ಮೊರೆಯಿಡುವೆನು I ಸ್ವಾಮಿ ದೇವನು ನನಗೆ ಕಿವಿಗೊಡುವನು II
2ಸಂಕಟದ ವೇಳೆಯೊಳು ಸ್ವಾಮಿಯನು ನಾ ಕರೆದೆ I ಇರುಳೆಲ್ಲ ಆಯಾಸವರಿಯದೆ ಕೈಚಾಚಿದೆ I ಎನ್ನ ಮನಸ್ಸಿತ್ತು ದುಃಖಶಮನಗೊಳ್ಳದೆ II
3ದೇವರನು ಸ್ಮರಿಸಿ ನಿಟ್ಟುಸಿರಿಡುತಿಹೆನು I ಹಂಬಲಿಸಿ ಮನದಲೇ ನಾ ಮರುಗುತಿಹೆನು II
4ನಿದ್ರಿಸದಂತೆ ನೀನೆನ್ನ ಕಣ್‍ಗಳ ತೆರೆದಿರುವೆ I ನುಡಿಯಲಾಗದ ತೆರದಿ ನಾ ತಳಮಳಗೊಂಡಿರುವೆ II
5ನೆನಪಿಗೆ ತಂದುಕೊಂಡೆ ಹಳೆಯ ದಿನಗಳನು I ಸ್ಮರಿಸಿಕೊಂಡೆ ಉರುಳಿಹೋದ ವರುಷಗಳನು II
6ನಿನ್ನ ಧ್ಯಾನ ಬರುತ್ತದೆ ನೆನಪಿಗೆ ರಾತ್ರಿಯೊಳು I ಆಲೋಚನೆ ಸುಳಿಯುತ್ತದೆ ನನ್ನಾಂತರ್ಯದೊಳು I ಈ ತೆರನ ಪ್ರಶ್ನೆಯೇಳುತ್ತದೆನ್ನ ಮನದೊಳು : II
7ಕೈಬಿಟ್ಟುಬಿಡುವನೋ ಪ್ರಭು ಸದಾಕಾಲಕು? I ಕೃಪೆಯನು ತೋರನೋ ಮತ್ತೆಂದೆಂದಿಗೂ? II
8ಆತನಚಲ ಪ್ರೀತಿ ಇನ್ನು ಮಾಯವಾಯಿತೋ? I ಆತನ ವಾಗ್ದಾನ ತಲತಲಾಂತರಕು ಮುಗಿಯಿತೋ? II
9ಕರುಣೆ ತೋರಲು ದೇವನು ಮರೆತುಬಿಟ್ಟನೋ? I ಕರುಳಿಗೆ ಕೋಪದಿಂದ ಬರೆಹಾಕಿಕೊಂಡನೋ? II
10ಆಗ ನಾನು “ನೆನೆಯಲೀಪರಿ, ನನ್ನ ಚಪಲತೆಯೇ ಕಾರಣ I ಮಾಡುವೆನೀಗ ಪರಾತ್ಪರನಾ ಪವಾಡ ವರುಷಗಳ ಸ್ಮರಣ” II
11ವರ್ಣಿಸುವೆನು ಪ್ರಭುವಿನ ಮಹತ್ಕಾರ್ಯಗಳೆಲ್ಲವನು I ಸ್ಮರಿಸುವೆ ನೀನಾದಿಯಿಂದ ನಡೆಸಿದ ಅದ್ಭುತಗಳನು II
12ಧ್ಯಾನಿಸುವೆ ನಾನಿನ್ನ ಕಾರ್ಯಗಳನೆಲ್ಲ I ಮಾಡುವೆ ಮನನ ನಿನ್ನ ಪವಾಡಗಳನೆಲ್ಲ II
13ನಿನ್ನ ಮಾರ್ಗ ದೇವಾ, ಪರಿಶುದ್ಧವಾದುದಯ್ಯಾ I ನಮ್ಮ ದೇವರಂತಹ ಮಹಾ ದೇವರಾರಯ್ಯಾ? II
14ಅದ್ಭುತಗಳನು ನಡೆಸುವಂತಹ ದೇವ ನೀನೆಮಗೆ I ತೋರ್ಪಡಿಸಿದೆ ನಿನ್ನಾ ಪರಾಕ್ರಮವನು ಜನತೆಗೆ II
15ನಿನ್ನ ಭುಜಬಲದಿಂದ ಯಕೋಬ, ಜೋಸೆಫ್ ವಂಶಜರನು I ಉದ್ಧಾರ ಮಾಡಿದೆ ನಿನ್ನ ಪ್ರಜೆಗಳಾಗಿಹ ಆ ಜನರನು II
16ಜಲರಾಶಿಗಳು ದೇವಾ, ನಿನ್ನ ಕಂಡವು I ಕಾಣುತ್ತಲೇ ನಡುಗಿ ತಳಮಳಗೊಂಡವು I ತಳದವರೆಗೂ ಅಲ್ಲಕಲ್ಲೋಲವಾದವು II
17ಮಳೆಗರಿಯಿತಾ ಮೇಘಮಂಡಲವು I ಭೋರ್ಗರೆಯಿತಾಗ ಅಂತರಿಕ್ಷವು I ಮಿಂಚಿದವು ಎಲ್ಲೆಡೆ ನಿನ್ನಂಬುಗಳು II
18ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ I ಹೊಳೆಯಿತು ನಿನ್ನ ಮಿಂಚು ಇಡೀ ಲೋಕದಲಿ I ಕಂಪಿಸಿತೀ ಭೂಮಂಡಲ ನಡುನಡುಗಿ II
19ಸಾಗರವನೆ ನೀ ತುಳಿದು ನಡೆದೆ I ಮಹಾಸಾಗರವನೆ ನೀ ದಾಟಿದೆ I ಹೆಜ್ಜೆಯ ಗುರುತನೂ ಕಾಣಬಿಡದೆ II
20ಕುರುಬನು ತನ್ನ ಕುರಿಮಂದೆಯನು ಕರೆದೊಯ್ಯುವಂತೆ I ಮೋಶೆ, ಆರೋನರಿಂದ ನಿನ್ನ ಪ್ರಜೆಗಳನು ನಡೆಸಿದೆ II