ಹಳೆಯ ಒಡಂಬಡಿಕೆKNCL

ಕೀರ್ತನೆಗಳು 76

1ಸುಪ್ರಸಿದ್ಧನು ದೇವನು ಜುದೇಯನಾಡಿನಲಿ I ಸುಪ್ರಖ್ಯಾತ ಆತನ ನಾಮ ಇಸ್ರಯೇಲಿನಲಿ II

2ಆತನ ಬಿಡಾರ ಸಾಲೇಮಿನಲಿ I ಆತನ ನಿವಾಸ ಸಿಯೋನಿನಲಿ II

3ಚೂರು ಚೂರು ಮಾಡಿಹನಲ್ಲಿ ಥಳಥಳಿಸುವ ಬಾಣಗಳನು I ಖಡ್ಗ, ಗುರಾಣಿ ಎಂಬೆಲ್ಲ ಯುದ್ಧಾಯುಧಗಳನು II

4ಹೇ ದೇವಾ, ನೀ ತೇಜೋಮಯನು I ಸ್ಥಿರಗಿರಿಗಳಿಗಿಂತ ಗಂಭೀರನು II

5ಕೆಚ್ಚೆದೆಯ ವೀರರು ಸುಲಿಗೆಯಾಗಿ ಚಿರನಿದ್ರೆಯಲಿಹರು I ಕೈಕತ್ತರಿಸಿದಂತಿರುವರು ಆ ರಣಧೀರರೆಲ್ಲರು II

6ನಿನ್ನ ಒಂದು ಗದರಿಕೆಗೆ, ಯಕೋಬನ ದೇವನೆ I ರಥಾಶ್ವಬಲಗಳೆಲ್ಲಾ ಬಿದ್ದಿವೆ ಬಿಮ್ಮನೆ II

7ನೀನಾದರೋ ದೇವಾ, ಮಹಾಭಯಂಕರನು I ಸಿಟ್ಟೇರಿದ ನಿನ್ನ ಮುಂದೆ ಯಾವನು ನಿಂತಾನು? II

8ನಿನ್ನ ನಿರ್ಣಯ ಸಗ್ಗದಿಂದ ಕೇಳಿಸಿದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II

9ನ್ಯಾಯಸ್ಥಾಪನೆಗೆ ದೇವನೆದ್ದು ನಿಂತಾಗ I ಧರೆಯ ದೀನರನುದ್ಧರಿಸಲು ಅನುವಾದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II

10ನರರ ಕೋಪ, ದೇವಾ ನಿನ್ನ ಘನತೆಗೆ ಸಾಧಕ I ಅಳಿದುಳಿದಾ ಕೋಪ ನಿನ್ನ ನಡುಕಟ್ಟಿಗೆ ಲಾಯಕ II

11ನಿಮ್ಮ ದೇವನಾದ ಸ್ವಾಮಿಗೆ ಸಲ್ಲಿಸಿರಿ ಹೊತ್ತ ಹರಕೆ I ಸುತ್ತಣರೆಲ್ಲರು ಸಮರ್ಪಿಸಲಿ ಭಯಂಕರನಿಗೆ ಕಾಣಿಕೆ II

12ಅರಸರ ದರ್ಪವನಡಗಿಸಿಬಿಡುವನು I ಭೂಪತಿಗಳಿಗೋ ಕಂಪನ ಕೊಡುವನು II