ಹಳೆಯ ಒಡಂಬಡಿಕೆKNCL

ಕೀರ್ತನೆಗಳು 74

1ಹೇ ದೇವಾ, ನಮ್ಮ ನೀಪರಿ ವರ್ಜಿಸಿಬಿಟ್ಟೆ ಏಕೆ? I ನೀ ಪಾಲಿಪ ಮಂದೆಯ ಮೇಲೀಗ ಉರಿಗೋಪವೇಕೆ? II

2ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ ಸಭೆಯನು I ಸ್ಮರಿಸಿಕೊ ಸೊತ್ತಾಗಿ ನೀ ರಕ್ಷಿಸಿಕೊಂಡ ಗೋತ್ರವನು I ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್ ಶಿಖರವನು II

3ಬಿಜಯಮಾಡು ಪಾಳುಬಿದ್ದಿರುವ ಹಳೆಯ ಆಲಯಕೆ I ಶತ್ರು ಕೆಡವಿಹನು ನೋಡು ಗರ್ಭಗುಡಿಯನೇ ಕೆಳಕೆ II

4ವೈರಿಗಳಾರ್ಭಟ ನಿನ್ನ ದರ್ಶನಾಲಯದ ಮಧ್ಯೆಯಲಿ I ಅವರ ಜಯ ಬಾವುಟ ಪವಿತ್ರ ಚಿಹ್ನೆಗಳಿಗೆ ಪ್ರತಿಯಾಗಿ II

5ಕಾಡಿನಲೋ ಎಂಬಂತೆ ಕೊಡಲಿಯನೆತ್ತಿ ಹಿಡಿದು I ದೇಗುಲದಲಿ ಕೈಗೊಡಲಿ, ಚಮಟಿಗಳ ಪಿಡಿದು I ನಾಶಮಾಡುತಿಹರು ನೋಡು ಕೆತ್ತನೆಗಳ ಕಡಿದು II

7ಅಗ್ನಿಗಾಹುತಿ ಮಾಡಿಹರು ನಿನ್ನ ನಾಮದ ಮಂದಿರವನು I ಹೊಲಸುಮಾಡಿ, ನೆಲಸಮಮಾಡಿಹರಿದೊ ನಿನ್ನ ದೇಗುಲವನು II

8‘ನಾಶ ಮಾಡೋಣ ಈ ಜನರನು’ ಎಂದಾಡಿಕೊಂಡಿಹರು I ದೇಶದ ಸಭಾಮಂದಿರಗಳನ್ನೆಲ್ಲ ಭಸ್ಮಮಾಡಿಹರು II

9ಆರಾಧನಾ ಚಿಹ್ನೆಗಳಿಲ್ಲ, ಪ್ರವಾದಿಗಳು ನಮಗಿಲ್ಲ I ಈ ಪರಿಸ್ಥಿತಿ ಎಲ್ಲಿಯತನಕ? ಬಲ್ಲವರಾರೂ ಇಲ್ಲ II

10ಎಲ್ಲಿಯತನಕ ದೇವಾ, ಶತ್ರುನಿಂದೆಗೆ ನೀ ಗುರಿಯಾಗುವೇ? I ಅನವರತ ನಿನ್ನ ನಾಮವನು ಧಿಕ್ಕರಿಸುವುದು ಸರಿಯೇ? II

11ಚಾಚಿದಾ ಬಲಗೈಯನೇಕೆ ಹಿಂದೆಗೆದುಕೊಂಡೆ I ಬಚ್ಚಿಟ್ಟಾ ಕೈಯಿಂದ ನೀನವರನು ಚಚ್ಚಿಬಿಡೈ II

12ಆದಿಯಿಂದ ದೇವಾ, ನೀನೇ ನನಗೆ ಅರಸನು I ಸಾಧಿಸುತ್ತಿರುವೆ ಜಗದೊಳುದ್ಧಾರವನು II

13ಸ್ವಶಕ್ತಿಯಿಂದ ಸಮುದ್ರವನೆ ಭೇದಿಸಿದೆ ನೀನು I ಜಲರಾಶಿಯ ಭುಜಂಗಗಳ ತಲೆ ಜಜ್ಜಿದಾತ ನೀನು II

14ಲೆವಿಯಾತಾನನ [1] ಶಿರಗಳ ಖಂಡನ ಮಾಡಿದವ ನೀನು I ಕಾಡು ಮೃಗಕ್ಕವನನು ಕೂಳಾಗಿಸಿದವ ನೀನು II

15ಒರತೆ ಊಟೆಗಳ ಉಕ್ಕಿಸಿದಾತ ನೀನು I ಹರಿವ ನದಿಗಳ ಬತ್ತಿಸಿಬಿಟ್ಟವ ನೀನು II

16ಹಗಲಿರುಳುಗಳಿಗೆ ನಿಯಾಮಕ ನೀನು I ರವಿತಾರೆಗಳ ನಿರ್ಮಾಪಕ ನೀನು II

17ಜಗದೆಲ್ಲೆ ಮೇರೆಗಳನು ನಿಗದಿ ಮಾಡಿದೆ ನೀನು I ಶೀತೋಷ್ಣಕಾಲಗಳನು ನೇಮಿಸಿದವನು ನೀನು II

18ನೆನಪಿರಲಿ ಪ್ರಭು, ಶತ್ರು ನಿನಗೆ ಮಾಡಿದಪಮಾನ I ನಿನ್ನ ಪೂಜ್ಯ ನಾಮಕೆ ದುರುಳರು ಕಕ್ಕಿದ ದೂಷಣ II

19ಕೊಡಬೇಡ ನಿನ್ನ ಬೆಳವಕ್ಕಿಯ ಪ್ರಾಣವ ಕಾಡುಮೃಗಕೆ I ನೀ ಮರೆತುಬಿಡಬೇಡ ನಿನ್ನ ದೀನದಲಿತರನು ಒಮ್ಮೆಗೆ II

20ನಿನ್ನೊಡಂಬಡಿಕೆಯನು ಗಮನವಿಟ್ಟು ಮಾನ್ಯಮಾಡು I ಕಗ್ಗತ್ತಲಿಗು, ಬಾಧಕರಿಗು ಬೀಡಾಗಿದೆ ನಾಡು II

21ಕುಗ್ಗಿದವರು ಹಿಂದಿರುಗದಿರಲಿ ಅವಮಾನದಿಂದ I ಬಡವರು ಕೀರ್ತಿಸಲಿ ನಿನ್ನ ನಾಮವನು ಭಕ್ತಿಯಿಂದ II

22ಎಚ್ಚೆತ್ತು, ದೇವಾ, ನಡೆಸು ನಿನ್ನ ನ್ಯಾಯವನು I ಗಮನಿಸು, ಅನುದಿನ ದುರ್ಮತಿ ನಿನ್ನ ನಿಂದಿಪುದನು II

23ಮರೆಯದಿರು ನಿನ್ನಾ ವಿರೋಧಿಗಳ ಗದ್ದಲವನು I ವೈರಿಯೆಬ್ಬಿಸುತ್ತಿರುವ ನಿರಂತರ ದೊಂಬಿಯನು II