ಹಳೆಯ ಒಡಂಬಡಿಕೆKNCL
1ದೇವನು ಎನಿತೋ ಒಳ್ಳೆಯವನು ಇಸ್ರಯೇಲಿಗೆ I ದಯಾಪರನಾತನು ಶುದ್ಧಹೃದಯಿಗಳಿಗೆ II
2ದುರ್ಜನರು ಧನಿಕರಾಗುವುದ ಕಂಡಾಗ I ಗರ್ವಿಗಳ ನೋಡಿ ನಾನಸೂಯೆಗೊಂಡಾಗ II
3ತಡವರಿಸಿದವು ನನ್ನ ಕಾಲುಗಳು I ಜಾರಿ ಬೀಳಲಿದ್ದವು ಹೆಜ್ಜೆಗಳು II
4ಆ ಜನರಿಗೆ ನೋವುಕಾವೆಂಬುದಿಲ್ಲ I ಅವರ ದೇಹ ಸಬಲವಾಗಿದೆಯಲ್ಲ! II
5ಇತರರಂತೆ ಅವರಿಗೆ ಸಂಕಟವಿಲ್ಲವಲ್ಲಾ! I ರೋಗರುಜೆ ಅವರಿಗಂಟುವುದಿಲ್ಲವಲ್ಲಾ! II
6ಈ ಕಾರಣ ಗರ್ವವೇ ಅವರಿಗೆ ಕಂಠಮಾಲೆ I ಹಿಂಸಾಚಾರವೇ ಅವರಿಗೆ ಬಟ್ಟೆಬರೆ II
7ದೋಷ ಹೊರಸೂಸುತ್ತಿದೆ ಕೊಬ್ಬಿನಾ ಕಣ್ಗಳಿಂದ I ದುಷ್ಕಲ್ಪನೆಗಳು ತುಳುಕುತಿವೆ ಹೃನ್ಮನಗಳಿಂದ II
8ಕೇಡು ಮಾತು, ಕೆಣಕು ಮಾತು ಅವರದು I ಜೊತೆಗೆ ಬಲಾತ್ಕಾರದ ಸೊಕ್ಕು ಮಾತು II
9ನಾಕವನೆ ತಾಕುತಿದೆ ಅವರ ಗರ್ವದ ನುಡಿ I ಜಗದಲಿ ಹರಡುತಿದೆ ಅವರ ದರ್ಪದ ನುಡಿ II
10ಎಂತಲೆ ಜನರವರ ಕಡೆ ತಿರುಗಿಕೊಳ್ಳುವರು I ನೀರಂತೆ ಅವರ ಮಾತನು ಹೀರಿಕೊಳ್ಳುವರು II
11“ಆ ದೇವನೆಂತು ಕಂಡುಹಿಡಿದಾನು?” ಎಂಬರು I “ಪರಾತ್ಪರನು ಪರಿಜ್ಞನೆ?” ಎಂದುಕೊಳ್ವರು II
12ದುರ್ಜನರಿದೊ ನಿಶ್ಚಿಂತರಾಗಿಹರು I ಸಿರಿಮೇಲೆ ಸಿರಿಯ ಶೇಖರಿಸುತಿಹರು II
13ನಾ ನಿರ್ಮಲಚಿತ್ತನಾಗಿ ಬಾಳಿದ್ದು ವ್ಯರ್ಥವೋ? I ಶುದ್ಧಹಸ್ತನಾಗಿ ನಡೆದುಕೊಂಡುದು ನಿರರ್ಥಕವೋ? II
14ಏಕೆನೆ, ದಿನವಿಡಿ ನಾ ಬಾಧೆಪಡುತ್ತಿರುವೆ I ದಿನದಿನವು ದಂಡನೆಗೆ ಗುರಿಯಾಗುತ್ತಿರುವೆ II
15ನಾ ಬಾಯ್ದೆರೆದು ನುಡಿದಿದ್ದೆನಾದರೆ ಈ ಪರಿ I ನಿನ್ನ ಭಕ್ತಕುಲಕೆ ನಾ ದ್ರೋಹಿಯೇ ಸರಿ II
16ಇದರ ಮರ್ಮವನು ನಾ ಬಗೆಹರಿಸಲು ಯತ್ನಿಸೆ I ತೋಚಿತೆನಗಿದು ಬಿಡಿಸಲಾಗದಂಥ ಸಮಸ್ಯೆ II
17ಆದರೆ ದೇವಾಲಯವನು ಹೊಕ್ಕು ನಿಂತಾಗ I ಆ ಜನರ ಅಂತಿಮ ಗತಿಯನಾಲೋಚಿಸಿದಾಗ I ಋಜುವಾದ ಜ್ಞಾನೋದಯ ಆಯಿತೆನಗಾಗ II
18ಜಾರು ನೆಲದಲಿ ಆ ಜನರನು ನೀ ನಿಲ್ಲಿಸಿರುವೆ I ನಿಶ್ಚಯವಾಗಿ ನೀ ಬೀಳಿಸಿ ಅವರನು ನಾಶಮಾಡುವೆ II
19ಕ್ಷಣ ಮಾತ್ರದಲಿ ಅಳಿದು ಹಾಳಾಗುವರು I ಭೀಕರವಾಗಿ ನಿರ್ಮೂಲವಾಗುವರು II
20ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ I ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ II
21ಹೃದಯ ನೊಂದು ಬೆಂದಿರಲು I ಮನದಲಿ ಅಲಗು ನಾಟಿರಲು II
22ನಾ ಮಂದಮತಿಯಾಗಿದ್ದೆ ಅರಿವಿಲ್ಲದೆ I ನಾ ವನ್ಯಮೃಗನಂತಿದ್ದೆ ನಿನ್ನ ಮುಂದೆ II
23ಆದರೂ ನಾನಿರುವೆ ನಿನ್ನ ಸನ್ನಿಧಿಯಲಿ I ನೀ ಹಿಡಿದಿರುವೆ ನನ್ನ ಬಲಗೈಯನು ಭದ್ರವಾಗಿ II
24ಸೂಕ್ತ ಸಲಹೆಯನಿತ್ತು ಮುಂದಕೆನ್ನ ನಡೆಸು I ಅಂತ್ಯದಲಿ ನಿನ್ನ ಮಹಿಮೆಗೆನ್ನ ಸೇರ್ಪಡಿಸು II
25ನನಗೆ ನೀನಲ್ಲದೆ ಇನ್ನಾರಿಹರು ಪರದಲಿ I ನಿನ್ನ ಹೊರತು ನನಗೇನು ಬೇಕಿಲ್ಲ ಇಹದಲಿ II
26ನನ್ನ ತನುಮನಗಳೆಲ್ಲವೂ ಸೊರಗಿಹೋದರೂ I ನನ್ನಾತ್ಮದ ಶಕ್ತಿ, ಶಾಶ್ವತ ಸೊತ್ತು ದೇವರು II
27ವಿನಾಶವಾಗುವರು ನಿನ್ನಿಂದ ದೂರ ಸರಿವವರು I ಧ್ವಂಸವಾಗುವರು ನಿನಗೆ ದ್ರೋಹವೆಸಗಿದವರು II
28ನಿನ್ನ ಸಾನ್ನಿಧ್ಯ ಸ್ವಾಮಿದೇವಾ, ನನಗೆಂಥ ಸೌಭಾಗ್ಯ I ನಿನ್ನ ಸತ್ಕಾರ್ಯಗಳ ಸಾರಲೆಂದೆ ನಿನ್ನನಾಶ್ರಯಿಸಿಕೊಂಡೆನಯ್ಯಾ II