ಹಳೆಯ ಒಡಂಬಡಿಕೆKNCL

ಕೀರ್ತನೆಗಳು 72

1ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ I ಕಲಿಸು ನಿನ್ನ ನೀತಿಯನು ರಾಜಕುವರನಿಗೆ II

2ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ I ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ II

3ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ I ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ II

4ದೀನದಲಿತರನಾತ ಉದ್ಧರಿಸಲಿ I ಬಡಬಗ್ಗರಿಗೆ ನ್ಯಾಯ ದೊರಕಿಸಲಿ I ಪ್ರಜಾಹಿಂಸಕರನು ಸದೆಬಡಿಯಲಿ II

5ಆತನು ಬಾಳಲಿ ಆಚಂದ್ರಾರ್ಕನಾಗಿ I ತಲತಲಾಂತರಕು ಭಯಭಕುತಿಯಿಂದಿರಲಿ II

6ಹುಲ್ಲುಕೊಯ್ದ ಹೊಲದ ಮೇಲೆ ಸುರಿವ ವೃಷ್ಟಿಯಂತೆ I ಬರಲಿ ಆತ ಒಣನೆಲವ ತೋಯ್ವ ಹದಮಳೆಯಂತೆ II

7ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ I ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ II

8ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ I ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ II

9ಅರಣ್ಯವಾಸಿಗಳು ಅರಸನಿಗೆ ಅಡ್ಡಬೀಳಲಿ I ಆತನ ಕಡುವೈರಿಗಳು ನೆಲದ ಮಣ್ಣು ಮುಕ್ಕಲಿ II

10ಕಪ್ಪಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು I ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು II

11ರಾಜರುಗಳು ಸಾಷ್ಟಾಂಗವೆರಗಲಿ ಆತನಿಗೆ I ರಾಷ್ಟ್ರ, ಘನರಾಷ್ಟ್ರಗಳು ಸೇವೆಸಲ್ಲಿಸಲಿ ಆತನಿಗೆ II

12ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು I ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು II

13ದೀನದರಿದ್ರರಿಗೆ ದಯೆಯ ತೋರುವನು I ದಲಿತರ ಪ್ರಾಣವನು ಕಾಪಾಡುವನು II

14ಅವರ ಜೀವ ಆತನ ದೃಷ್ಟಿಯಲಿ ಅಮೂಲ್ಯ I ಜುಲುಮೆ ಶೋಷಣೆಗಳ ನೀಗಿಪುದು ಆತನ ಕಾರ್ಯ II

15ಅರಸ ಬಾಳಲಿ ಚಿರಕಾಲ; ದೊರಕಲಿ ಆತನಿಗೆ ಶೆಬಾದ ಬಂಗಾರ I ಜರುಗಲಿ ಪ್ರಾರ್ಥನೆ ಸದಾಕಾಲ; ಆಶೀರ್ವಾದ ಸಿಗಲಿ ಅನವರತ II

16ಸಮೃದ್ಧಿಯಾಗಲಿ ನಾಡಿನ ದವಸಧಾನ್ಯ ನೆಲಮಲೆಗಳ ಮೇಲೆ I ಸೊಂಪಾಗಲಿ ಅದರ ಹಣ್ಣುಹಂಪಲು ಲೆಬನೋನಿನ ಮರಗಳಂತೆ I ಹುಲುಸಾಗಲಿ ನಗರ ನಿವಾಸಿಗಳ ಸಂಖ್ಯೆ ಬಯಲಿನ ಹುಲ್ಲಿನಂತೆ II

17ಶಾಶ್ವತವಾಗಲಿ ಶ್ರೀನಾಮ ಆತನಿಗೆ I ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ I ಆತನಾಶೀರ್ವಾದ ಕೋರಲಿ ಸರ್ವರು ತಮಗೆ I ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ II

18ಸುತ್ಯರ್ಹನು ಸ್ವಾಮಿದೇವನು, ಇಸ್ರಯೇಲರ ದೇವನು I ಆತನೋರ್ವನೇ ಮಹತ್ಕಾರ್ಯಗಳನು ಎಸಗುವಂತವನು II

19ಮಹಿಮಾಯುಕ್ತ ಆತನ ನಾಮಕೆ ಸದಾಕಾಲವು ಸ್ತುತಿ I ಆಮೆನ್ ಆಮೆನ್ ಭೂಮಂಡಲವೆಲ್ಲಾ ಆತನ ಪ್ರಭಾವ ಪೂರ್ತಿ I ಇತಿ, ಜೆಸ್ಸೆಯನ ಕುವರ ದಾವೀದನ ಪ್ರಾರ್ಥನೆಗಳ ಸಮಾಪ್ತಿ II