ಹಳೆಯ ಒಡಂಬಡಿಕೆKNCL

ಕೀರ್ತನೆಗಳು 69

1ಒಡನೆ ಕೈ ನೀಡಿ ಕಾಪಾಡು ದೇವಾ I ಕುತ್ತಿಗೆಗೆ ಬಂದಿದೆ ತುಂಬು ಪ್ರವಾಹ II

2ಮುಳುಗುತಿಹೆನು ಕಳ್ಳುಸುಬಿನಲಿ; ಕಾಲೂರಲೆನಗೆ ನೆಲವಿಲ್ಲ I ಸಿಕ್ಕಿಹೆನು ಆಳ ಮಡುವಿನಲ್ಲಿ, ಹುಚ್ಚುಹೊಳೆ ಕೊಚ್ಚುತ್ತಿದೆಯಲ್ಲಾ II

3ಕಾಯ್ದು ಕಾಯ್ದು ಕಣ್ಣು ಗುಳಿಬಿದ್ದಿದೆ ದೇವಾ, ನಿನಗಾಗಿ I ಗಂಟಲು ಒಣಗಿದೆ, ಜೀವ ಸೊರಗಿದೆ, ನಿನ್ನ ಕೂಗಿ ಕೂಗಿ II

4ತಲೆ ಕೂದಲಿಗಿಂತ ಮಿಗಿಲಿಹರು ನಿಷ್ಕಾರಣ ದ್ವೇಷಿಗಳು I ಬಲಿಷ್ಟರಿಹರು ನನ್ನ ಕೊಲೆಗಡುಕರು, ನಿರ್ನಿಮಿತ್ತ ಶತ್ರುಗಳು I ಕಳ್ಳನಾನಲ್ಲನಾದರೂ ದಂಡಕೋರುತಿಹರು ವೈರಿಗಳು II

5ನನ್ನ ಮೂರ್ಖತನವನು ದೇವಾ, ನೀ ಬಲ್ಲೆಯಯ್ಯಾ I ನನ್ನಪರಾಧಗಳು ನಿನಗೆ ಮರೆಯಾಗಿಲ್ಲವಯ್ಯಾ II

6ಪ್ರಭು ಸೇನಾಧೀಶ್ವರಾ, I ನನ್ನಿಂದ ನಿರಾಶೆಯಾಗದಿರಲಿ, ನಿನ್ನ ನಂಬಿದವರಿಗೆ II ಇಸ್ರಯೇಲರ ದೇವಾ I ನನ್ನಿಂದ ನಿಂದೆಯಾಗದಿರಲಿ ನಿನ್ನ ದರ್ಶನಾರ್ಥಿಗಳಿಗೆ II

7ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ I ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ II

8ನನ್ನವರಿಗೇ ನಾನನ್ಯನಾದೆನಯ್ಯಾ I ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ II

9ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ I ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ II

10ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ I ಚುಚ್ಚುಮಾತಿಗೆ ಕಾರಣವಾಯಿತಲ್ಲಾ II

11ಗೋಣಿತಟ್ಟನು ನಾನುಟ್ಟುಕೊಂಡೆನಯ್ಯಾ I ಅಣಕ ಅವಹೇಳನಕೆ ಗುರಿಯಾದೆನಯ್ಯಾ II

12ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ I ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ II

13ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ I ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ II

14ಕಳ್ಳುಸುಬಿನಲಿ ನಾನಿಳಿದು ಹೋಗದಂತೆ ಸೆಳೆದುಕೊ I ಪೊಳ್ಳು ದುರುಳರ ಮಡುವಿನಲಿ ನಾ ಮುಳುಗದಂತೆ ಎಳೆದುಕೊ II

15ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ I ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ I ಪಾತಾಳವೆನ್ನನು ನುಂಗದಿರಲಯ್ಯಾ II

16ಆಲಿಸೆನ್ನ ಪ್ರಭು, ನಿನ್ನ ಪ್ರೀತಿ ಸುಮಧುರ I ಕಟಾಕ್ಷಿಸೆನ್ನನು ದೇವಾ, ಕರುಣಾಸಾಗರ II

17ನಿನ್ನ ದಾಸನಿಗೆ ವಿಮುಖನಾಗಬೇಡಯ್ಯಾ I ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ II

18ಹತ್ತಿರ ಬಂದೆನ್ನ ಉದ್ಧರಿಸಯ್ಯಾ I ಶತ್ರುಗಳ ಕೈಯಿಂದ ರಕ್ಷಿಸಯ್ಯಾ II

19ನನಗಾದ ನಿಂದೆ, ಅಪಮಾನ, ಲಜ್ಜೆ ನಿನಗೆ ತಿಳಿದಿದೆಯಯ್ಯಾ I ನನ್ನ ವೈರಿ ವಿರೋಧಿಗಳು ನಿನಗೆ ಮರೆಯಾಗಿಲ್ಲವಯ್ಯಾ II

20ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ I ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ I ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ II

21ಹಸಿದ ನನಗೆ ವಿಷಬೆರೆತ ಆಹಾರವಿತ್ತರಯ್ಯಾ I ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ II

22ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ I ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ II

23ಅವರ ಕಣ್ಣು ಮಬ್ಬಾಗಿ ಕಾಣದೆಹೋಗಲಿ I ಅವರ ಸೊಂಟ ಬಿಡುವಿಲ್ಲದೆ ನಡುಗುತ್ತಿರಲಿ II

24ನಿನ್ನ ರೌದ್ರ ಅವರ ಮೇಲೆರಗಲಿ I ನಿನ್ನ ಕೋಪಾಗ್ನಿ ಅವರನು ದಹಿಸಲಿ II

25ಅವರ ಪಾಳೆಯ ಹಾಳು ಬೀಳಲಿ I ಅವರ ಗುಡಾರ ಬಿಕೋ ಎನಿಸಲಿ II

26ನೀ ಗಾಯಪಡಿಸಿದವರನು ಪೀಡಿಸುತಿಹರು I ಗಾಯದ ಮೇಲೆ ಬರೆಯೆಳೆಯುತಿಹರು II

27ದಂಡನೆ ಮೇಲೆ ದಂಡನೆಯನು ಅವರಿಗೆ ವಿಧಿಸು I ಅವರು ನಿರಪರಾಧಿಗಳೆಂಬುದನು ತಪ್ಪಿಸು II

28ಉಳಿಸಬೇಡವರನು ಜೀವಬಾಧ್ಯರ ಪಟ್ಟಿಯಲಿ I ಸೇರಿಸಬೇಡವರನು ಸಜ್ಜನರ ಸಂಖ್ಯೆಯಲಿ II

29ದೇವಾ, ನಾ ನೊಂದುಬೆಂದಿಹೆನಯ್ಯಾ I ಉದ್ಧರಿಸಿ ನನ್ನನು ಕಾಪಾಡಯ್ಯಾ II

30ಸಂಕೀರ್ತಿಸುವೆನು ದೇವರ ಶ್ರೀನಾಮವನು I ಕೃತಜ್ಞತೆಯಿಂದಾತನನು ಕೊಂಡಾಡುವೆನು II

31ಸ್ವಾಮಿ ದೇವನಿಗಿದುವೇ ಸುಪ್ರೀತಿ I ಕೊಂಬುಗೊರಸುಳ್ಳ ಗೂಳಿಬಲಿಗಿಂತ II

32ಇದನರಿತು ದೀನದಲಿತರು ಆನಂದಗೊಳ್ಳಲಿ I ದೇವನನು ಅರಸುವವರು ಪುನಶ್ಚೇತನಗೊಳ್ಳಲಿ II

33ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು I ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು II

34ಭೂಮ್ಯಾಕಾಶಗಳು ಆತನನು ಕೊಂಡಾಡಲಿ I ಸಾಗರಗಳು, ಜಲಚರಗಳು ಆತನನು ಭಜಿಸಲಿ II

35ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು I ಕಟ್ಟಿಸುವನು ಯೆಹೂದ ನಾಡಿನ ನಗರಗಳನು I ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು II

36ಅವರ ವಂಶಜರೇ ಬಾಧ್ಯಸ್ಥರಾಗುವರದಕೆ I ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ II