ಹಳೆಯ ಒಡಂಬಡಿಕೆKNCL

ಕೀರ್ತನೆಗಳು 66

1ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I

2ಹಾಡಲಿ ಆತನ ಶ್ರೀನಾಮ ಮಹಿಮೆಗೆ II

3“ನಿನ್ನ ಕಾರ್ಯಗಳೆನಿತೋ ಚೇತೋಹಾರಿ I ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II

4ಜಗವೆಲ್ಲ ಪೂಜಿಪುದು ನಿನ್ನನು I ಪೊಗಳಿ ಮಾಳ್ಪುದು ಗುಣಗಾನವನು I ಕೀರ್ತಿಸುವುದು ನಿನ್ನ ನಾಮವನು” II

5ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ II

6ಒಣನೆಲವಾಗಿ ಮಾರ್ಪಡಿಸಿದ ಕಡಲನು I ಕಾಲು ನಡೆಯಲೇ ದಾಟಿಸಿದ ನದಿಯನು I ಇದ ನಿಮಿತ್ತ ಪಡೆಯೋಣ ಆನಂದವನು II

7ಆತನಾಳ್ವಿಕೆ ಶಕ್ತಿಯುತ, ನಿರಂತರ I ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I ಜಂಬ ಕೊಚ್ಚದಿರಲಿ ದಂಗೆಕೋರ II

8ಜನಾಂಗಗಳೇ, ನಮಿಸಿರಿ ನಮ್ಮ ದೇವನನು I ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು II

9ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ I ಕಾಲೆಡವದಂತೆ ಕಾಪಾಡಿದನಯ್ಯಾ II

10ಹೇ ದೇವಾ, ನೀ ನಮ್ಮನ್ನು ಪರಿಶೋಧಿಸಿದೆ I ಪುಟಕ್ಕಿಟ್ಟ ಚಿನ್ನದಂತೆ ಶುದ್ಧೀಕರಿಸಿದೆ II

11ಉರುಲು ಬಲೆಗೆ ನಮ್ಮನು ಸಿಕ್ಕಿಸಿದೆ I ಭಾರಿ ಹೊರೆಯನು ಬೆನ್ನಿಗೆ ಹೊರಿಸಿದೆ II

12ಶತ್ರುಗಳೆಮ್ಮ ತಲೆಮೇಲೆ ರಥವನೋಡಗೊಳಿಸಿದೆ I ಅಗ್ನಿಯನೂ ಜಲವನೂ ದಾಟುವಂತೆ ಮಾಡಿದೆ I ಕೊನೆಗೆ ಸಮೃದ್ಧ ನಾಡಿಗೆಮ್ಮನು ಸೇರಿಸಿದೆ II

13ದಹನ ಬಲಿಯನರ್ಪಿಸೆ ದೇಗುಲಕೆ ಧಾವಿಸುವೆ I ನಿನಗೆ ನಾ ಹೊತ್ತ ಹರಕೆಗಳನ್ನು ತೀರಿಸುವೆ II

14ಪೂರೈಸುವೆನು ಬಾಯಾರೆ ಮಾಡಿದ ಹರಕೆಯನು I ಸಂಕಟಕಾಲದಲಿ ನಾ ಮಾಡಿದ ವ್ರತವನು II

15ಕೊಬ್ಬಿದ ಪ್ರಾಣಿಗಳನರ್ಪಿಸುವೆನು ಯಜ್ಞವಾಗಿ I ಹೋತಹೋರಿಗಳ ಕೊಡುವೆನು ನಿನಗೆ ಕಾಣಿಕೆಯಾಗಿ I ಟಗರುಗಳ ಬಲಿಧೂಪವೆತ್ತುವೆನು ಆರತಿಯಾಗಿ II

16ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ II

17ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು I ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು II

18ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ I ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ II

19ಆದರೆನ್ನ ಮೊರೆಯು ದೇವನನು ಮುಟ್ಟಿರುವುದು ನಿಜ I ಎನ್ನ ಪ್ರಾರ್ಥನೆಗಾತ ಕಿವಿಗೊಟ್ಟಿರುವುದು ಸಹಜ II

20ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II