ಹಳೆಯ ಒಡಂಬಡಿಕೆKNCL

ಕೀರ್ತನೆಗಳು 64

1ಕಿವಿಗೊಡು ದೇವಾ, ನನ್ನಾತ್ಮದ ಮೊರೆಗೆ I ಕಾಪಾಡು, ಶತ್ರುಗಳ ಭಯವಿದೆ ನನಗೆ II

2ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ I ಕಾದಿರಿಸೆನ್ನ ದುರುಳರ ದೊಂಬಿಯಿಂದ II

3ನಾಲಗೆಯೆಂಬ ಅಲಗನವರು ಮಸೆದಿಹರು I ನಂಜುಮಾತೆಂಬ ಅಂಬನು ಹೂಡಿಹರು II

4ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು ನಿರಪರಾಧಿಗಳನೆ I ಅಂಜದೇ ಅಳುಕದೆ ಎಸೆವರು ಬಾಣಗಳನು ತಟ್ಟನೆ II

5ಕೆಟ್ಟದನು ಮಾಡಲು ಮನದಟ್ಟುಮಾಡಿಕೊಂಡಿಹರು I “ಗುಟ್ಟಾಗಿಡೋಣ ಉರುಲು, ಕಾಂಬರಾರು?” ಎನ್ನುತಿಹರು? II

6ಅವರು ಹೂಡಿರುವುದು ಕುತಂತ್ರವನು I ಕೊಚ್ಚಿಕೊಳ್ವುದು ಚತುರೋಪಾಯವನು I ಅಶೋಧ್ಯ ಮಾನವನ ಹೃನ್ಮನಗಳು! II

7ಆದರೆ ಎಸೆವನು ಬಾಣವನು ದೇವನೆ I ಪಡೆವರು ಅಪಘಾತವನು ಫಕ್ಕನೆ II

8ನಾಲಿಗೆ ನಿಮಿತ್ತ ಅವರು ಅವನತಿಗೀಡಾಗುವರು I ನೋಡುವವರೆಲ್ಲರು ತಲೆಯಾಡಿಸಿ ಅಣಕಿಸುವರು II

9ಜನರೆಲ್ಲರಾಗ ತಲ್ಲಣಗೊಳ್ಳುವರು I ದೇವಕಾರ್ಯವಿದು ಎಂದು ಧ್ಯಾನಿಪರು I ಆತನ ಸತ್ಕಾರ್ಯಗಳನು ಸಾರುವರು II

10ಹರ್ಷಿಸಲಿ ಸಜ್ಜನರು ಪ್ರಭುವಿನಲಿ I ಆಶ್ರಯ ಪಡೆಯಲೀಗಲೆ ಆತನಲಿ I ನೇರ ಹೃದಯಿಗಳೆಲ್ಲರು ಹಿಗ್ಗಲಿ II