ಹಳೆಯ ಒಡಂಬಡಿಕೆKNCL

ಕೀರ್ತನೆಗಳು 5

1ಕಿವಿಗೊಡು ಪ್ರಭು, ಎನ್ನ ನುಡಿಗೆ I ಬಗೆಗೊಡು ಎನ್ನಾತ್ಮದ ಮೊರೆಗೆ II

2ಎನ್ನರಸನೇ, ದೇವನೇ I ಮಾಡುವೆ ನಿನಗೆ ಪ್ರಾರ್ಥನೆ I ನೀ ಆಲಿಸೆನ್ನ ಯಾಚನೆ II

3ಉದಯಕಾಲದಲ್ಲಿ ಪ್ರಭು, ನಿನಗೆ ಕೇಳಿಬರುವುದು ನನ್ನ ಸ್ವರ I ಉದಯಾರಾಧನೆ ಮಾಡಿ ಎದುರು ನೋಡುತ್ತಿರುವೆ ನಾ ಸದುತ್ತರ II

4ದುಷ್ಟತನಕೆ ದೇವ, ನಿನಗಿಲ್ಲ ಒಲವು I ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು II

5ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು I ನಿನಗೆ ವೈರಿಗಳಾಗುವರು ಅಧರ್ಮಿಗಳು II

6ಹುಸಿ ನುಡಿವವರನು ಪ್ರಭು, ನೀ ನಾಶಮಾಡುವೆ I ಹಿಂಸಕರನು, ವಂಚಕರನು ನೀ ಹೇಸಿಬಿಡುವೆ II

7ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ I ಭಕುತಿಯಿಂದ ಅಡ್ಡಬೀಳುವೆ ನಿನ್ನ ಪವಿತ್ರಾಲಯದತ್ತ II

8ಶತ್ರುಗಳು ಮುತ್ತಿಹರು, ಸತ್ಯ ಪಥದಲಿ ನಡೆಸೆನ್ನನು I ನೇರಮಾಡೆನಗೆ ದೇವಾ, ನಿನ್ನ ಸಿರಿಮಾರ್ಗವನು II

9ಅವರ ಬಾಯಲಿ ಹುಸಿನುಡಿ, ಹೃದಯವಾದರೊ ವಿನಾಶದ ಶರಧಿ I ಅವರ ಜಿಹ್ವೆಯಲಿ ಮುಖಸ್ತುತಿ, ಕಂಠವಾದರೋ ತೆರೆದ ಸಮಾಧಿ II

10ಅವರಪರಾಧಿಗಳೆಂದು ಹೇ ದೇವಾ, ನಿರ್ಣಯಿಸಿಬಿಡು I ಅವರ ಮೋಸದ ಪಾಶದಲೇ ಅವರನು ಸಿಕ್ಕಿಸಿಬಿಡು I ಅವರನೇಕ ಪಾಪಗಳಿಗಾಗಿ ಅವರನು ದಬ್ಬಿಬಿಡು I ಅವರು ನಿನ್ನ ವಿರುದ್ಧ ದಂಗೆಯೆದ್ದವರು, ನೋಡು II

11ದೊರಕುವುದು ದೇವಾ, ನಿನ್ನಾಶೀರ್ವಾದ ಸಜ್ಜನರಿಗೆ I ಕವಚವಾದಂತಿಹುದು ನಿನ್ನ ಕರುಣೆ ಅಂಥವರಿಗೆ II ಎಂದೇ ಹರ್ಷಾನಂದಗೊಳ್ವರು ನಿನ್ನನಾಶ್ರಯಿಸಿದವರೆಲ್ಲರು I ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ ನಾಮಪ್ರಿಯರೆಲ್ಲರು II