ಹಳೆಯ ಒಡಂಬಡಿಕೆKNCL

ಕೀರ್ತನೆಗಳು 58

1ಜನನಾಯಕರೇ, ನ್ಯಾಯಬದ್ಧವೊ ನಿಮ್ಮ ತೀರ್ಪುಗಳು I ವ್ಯಾಜ್ಯಗಳನು ಬಗೆಹರಿಸುತ್ತವೆಯೆ ನಿಮ್ಮ ನಿರ್ಣಯಗಳು? II

2ಬದಲಿಗೆ ಕಲ್ಪಿಸುತ್ತೀರಿ ಅಕ್ರಮವನು ಮನದಲಿ I ಧರೆಗೀಯುತ್ತೀರಿ ಹಿಂಸಾಚಾರವನು ತೂಕದಲಿ II

3ದುರುಳರು ದಾರಿತಪ್ಪಿದವರು ಉದರದಿಂದಲೆ I ಸಟೆಯಾಡುವ ಅಕ್ರಮಿಗಳವರು ಹುಟ್ಟಿನಿಂದಲೆ II

4ಸರ್ಪಗಳಂತಾ ಜನ ವಿಷಭರಿತ I ನಾಗರದಂತೆ ಅವರ ಕಿವಿ ಮಂದ II

5ಒಲಿಯದವರ ಕಿವಿ ಪುಂಗಿಯ ನಾದಕೆ I ಮಣಿಯವು ಹಾವಾಡಿಗನ ಮಾಟಕೆ II

6ಮುರಿದುಬಿಡು ಹೇ ದೇವಾ, ಆ ದುರುಳರ ಹಲ್ಲುಗಳನು I ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ ಕೋರೆಗಳನು II

7ಅವರಾಗಲಿ ಬೇಗನೆ ಕಾಣದೆ ಹೋಗುವ ತೊರೆಯಂತೆ I ನಸುಕಿ ನಾಶವಾಗಲಿ ಪಾದದಡಿ ಸಿಲುಕಿದ ಗರಿಕೆಕಣದಂತೆ II

8ನುಸುಳಿ ನುಸುಳಿ ನಶಿಸಿಹೋಗಲಿ ಬಸವನ ಹುಳದಂತೆ I ರವಿಯ ಬೆಳಕನು ಕಾಣದಿರಲಿ ಗರ್ಭವಿಳಿದ ಪಿಂಡದಂತೆ II

9ಹಸುರಿರಲಿ ಒಣಗಿರಲಿ, ಒಲೆ ಪಾಲಾಗಲಿ ಮುಳ್ಳಿನಂತೆ I ನಿಶ್ಯೇಷವಾಗಲಿ ದೇವಕೋಪಾಗ್ನಿಗೆ ಸಿಲುಕಿದಂತೆ II

10ನಲಿವರು ಸಜ್ಜನರು ಈ ಪ್ರತೀಕಾರ ನೋಟದಲಿ I ಕಾಲುತೊಳೆಯುವರವರು ಆ ದುರ್ಜನರ ನೆತ್ತರಲಿ II

11“ನ್ಯಾಯ ನಿರ್ಣಯಿಸುವಂಥ ದೇವನಿಹನು ಜಗದಲಿ I ಸಜ್ಜನರಿಗೆ ಸತ್ಫಲ ಕಟ್ಟಿಟ್ಟ ಬುತ್ತಿ,” ಇದು ನಾಣ್ನುಡಿ II