ಹಳೆಯ ಒಡಂಬಡಿಕೆKNCL
1ಹೇ ದೇವಾ, ಕಿವಿಗೊಡು ನನ್ನ ಪ್ರಾರ್ಥನೆಗೆ I ವಿಮುಖನಾಗಬೇಡ ನನ್ನ ವಿಜ್ಞಾಪನೆಗೆ II
2ನನ್ನ ಮನವಿಯನಾಲಿಸು, ದಯಪಾಲಿಸು ಸದುತ್ತರವನು I ಚಿಂತಾಕ್ರಾಂತನಾದ ನಾನು ಪ್ರಲಾಪಿಸುತ್ತಿರುವೆನು II
3ಶತ್ರುಗರ್ಜನೆಯಿಂದ, ದುರುಳರ ಹಿಂಸೆಯಿಂದ I ಅವರೆನಗೆ ಬರಮಾಡಿರುವ ಆತಂಕದಿಂದ I ದ್ವೇಷಿಸುತಿಹರೆನ್ನನು ಕೋಪಾವೇಶದಿಂದ II
4ನನ್ನ ಹೃದಯವು ನೊಂದು ಬೆಂದಿದೆ I ಮರಣ ಭಯವು ಆವರಿಸಿಕೊಂಡಿದೆ II
5ನಡುಗುತ್ತಿರುವೆ ಭಯದಿಂದ I ಕುಸಿಯುತ್ತಿರುವೆ ದಿಗಿಲಿನಿಂದ II
6‘ಆಹಾ ರೆಕ್ಕೆಗಳು ನನಗಿತ್ತಾದರೆ ಪಾರಿವಾಳದಂತೆ I ಹಾರಿ ಹೋಗಿ ನೆಮ್ಮದಿಯಿಂದಿರಬಹುದಿತ್ತು’ ಎನ್ನುತ್ತಿದ್ದೆ II
7ದೂರ, ಬಲುದೂರ ಹಾರಿ ಹೋಗುತ್ತಿದ್ದೆ I ನಿರ್ಜನ ಪ್ರದೇಶದಲಿ ವಾಸಿಸುತ್ತಿದ್ದೆ II
8ಹುಡುಕುತ್ತಿದ್ದೆ ನಾ ಗೂಡನು ತವಕದಿಂದ I ಪಾರಾಗುತ್ತಿದ್ದೆ ಬಿರುಗಾಳಿ ಮಳೆಯಿಂದ II
9ಭ್ರಾಂತಗೊಳಿಸು ಶತ್ರುವನು, ಗಲಿಬಿಲಿಗೊಳಿಸು ಅವರ ನುಡಿಯನು I ನಗರದಲಿ ನಾ ಕಾಣುತ್ತಿರುವೆ ಪ್ರಭೂ, ಹಿಂಸೆ ಕಲಹವನು II
10ಗೋಡೆ ಸುತ್ತಲೂ ತಿರುಗುತಿಹರವರು ಹಗಲಿರುಳು I ನಗರದೊಳಗೆ ತುಂಬಿವೆ ಅಕ್ರಮ ಅನಾಚಾರಗಳು II
11ಅದರ ಮಧ್ಯೆಯೇ ಇವೆ ವಿನಾಶಕರ ಶಕ್ತಿಗಳು I ಅದರ ಬೀದಿಬಿಟ್ಟು ತೊಲಗವು ಮೋಸ ವಂಚನೆಗಳು II
12ನಾ ಸಹಿಸಿಕೊಳ್ಳುತ್ತಿದ್ದೆ ದೂಷಿಸುವವನು ಶತ್ರುವಾಗಿದ್ದರೆ I ನಾನವಿತುಕೊಳ್ಳುತ್ತಿದ್ದೆ ದ್ವೇಷಿಸುವವನು ವೈರಿಯಾಗಿದ್ದರೆ II
13ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು I ನನಗೆ ಸರಿಯಾದವನು, ಗೆಳೆಯನು, ನನ್ನಾಪ್ತಮಿತ್ರನು II
14ತೆರಳಲಿಲ್ಲವೆ ನಾವೀರ್ವರು ದೇವಾಲಯಕೆ I ಭಕ್ತರೊಂದಿಗೆ ಮಧುರ ಸಂಭಾಷಣೆಯೊಂದಿಗೆ? II
15ಮರಣ ತಟ್ಟನೆ ಆ ದುಷ್ಟರ ಮೇಲೆರಗಲಿ I ಜೀವಸಹಿತ ಪಾತಾಳಕ್ಕವರು ಇಳಿಯಲಿ I ಕೆಟ್ಟತನ ಮನೆಮಾಡಿದೆ ಅವರ ಮಧ್ಯದಲಿ II
16ನಾನಾದರೋ ಮೊರೆಯಿಡುವೆ ದೇವರಿಗೆ I ರಕ್ಷಣೆ ನೀಡದಿರನು ಪ್ರಭು ನನಗೆ II
17ತ್ರಿಕಾಲದೊಳು ಗೋಗರೆದು ಯಾಚಿಸುವೆನು I ಎನ್ನಯ ಮೊರೆಗಾತನು ಕಿವಿಗೊಡದಿರನು II
18ನನ್ನ ಸುತ್ತಲೂ ಶತ್ರುವ್ಯೂಹವಿರುವಲ್ಲಿ I ರಕ್ಷಿಸುವನೆನ್ನನು ನಾ ನಡೆಸುವ ದಾಳಿಯಲಿ II
19ಆದಿಯಿಂದಾಳುವ ದೇವನು ಅವರ ಸೊಕ್ಕಡಗಿಸದೆ ಬಿಡನು I ಪರಿವರ್ತಿಸಲಾಗದು ದೇವಭಯವಿಲ್ಲದವರ ಹೃದಯವನು II
20ಮಿತ್ರರ ಮೇಲೆ ಕೈಯೆತ್ತಿರುವನು ಆ ನನ್ನ ಗೆಳೆಯನು I ತಾನು ಮಾಡಿದ ಒಪ್ಪಂದವನು ತಾನೆ ಮೀರಿ ನಡೆದಿಹನು II
21ಅವನ ಬಾಯಿ ಬೆಣ್ಣೆಗಿಂತ ನಯ, ಆದರೆ ಹೃದಯ ಕಲಹಭರಿತ I ನುಡಿ ಎಣ್ಣೆಗಿಂತ ನುಣುಪು, ಆದರೆ ಬಿಚ್ಚುಗತ್ತಿಗಿಂತ ಹರಿತ II
22ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು I ಉದ್ಧರಿಸುವನು, ಸಜ್ಜನರನೆಂದಿಗೂ ಕದಲಗೊಡಿಸನು II
23ದುರ್ಜನರನು ದೇವಾ, ನೀ ದಬ್ಬಿಬಿಡುವೆ ಪಾತಾಳಕೆ I ಅರ್ಧಾಯುಷ್ಯವನೂ ಬಾಳಬಿಡೆ ವಂಚಕ ಕೊಲೆಗಾರರಿಗೆ I ನಾನಾದರೋ ಓ ದೇವಾ, ನೆಮ್ಮಿಗೊಂಡಿರುವೆ ನಿನಗೆ II