ಹಳೆಯ ಒಡಂಬಡಿಕೆKNCL

ಕೀರ್ತನೆಗಳು 51

1ಕೃಪಾಳು, ದೇವಾ, ಕರುಣಿಸೆನ್ನನು I ಕರುಣಾನಿಧಿ, ಅಳಿಸೆನ್ನ ದೋಷವನು II

2ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು I ದೋಷಪರಿಹರಿಸಿ ಶುದ್ಧಗೊಳಿಸೆನ್ನನು II

3ಒಪ್ಪಿಕೊಂಡೆನಿದೋ, ನಾನೇ ಅಪರಾಧಿ I ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ II

4ಹೌದು ದೇವಾ, ನಿನಗೆ ದ್ರೋಹವೆಸಗಿದೆ I ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ II ನಿನ್ನ ನಿರ್ಣಯವು ನ್ಯಾಯಯುತ I ನೀ ನೀಡುವ ತೀರ್ಪು ನಿರ್ಲಿಪ್ತ II

5ನಾ ಜನಿಸಿದೆ ಪಾಪಪಂಕದಲೆ I ದ್ರೋಹಿ ನಾ ಮಾತೃಗರ್ಭದಿಂದಲೆ II

6ಅಂತರಂಗ ಶುದ್ಧಿಯನು ನೀ ಬಯಸುತಿ I ಅಂತರ್ಯ ಜ್ಞಾನವನು ಉದಯಗೊಳಿಸುತಿ II

7ಹಿಸ್ಸೋಪಿನಿಂದ ನೀ ಚಿಮುಕಿಸೆ, ನಾ ಶುದ್ಧನಾಗುವೆ I ನೀ ತೊಳೆದೆಯಾದರೆ, ಹಿಮಕ್ಕಿಂತ ನಾ ಬೆಳ್ಳಗಾಗುವೆ II

8ಹರ್ಷಾನಂದವನು ಮೊಳಗಿಸೆನ್ನೊಳು I ಪುಳಕಗೊಳ್ಳುವುವು ನೀ ಮುರಿದೆಲುಬುಗಳು II

9ನನ್ನ ಪಾಪದೋಷಕೆ ವಿಮುಖನಾಗು I ಸರ್ವದ್ರೋಹಗಳನು ಅಳಿಸಿಹಾಕು II

10ಶುದ್ಧ ಹೃದಯವನು ದೇವಾ, ನಿರ್ಮಿಸು I ಅಂತರಂಗವನು ಚೇತನಗೊಳಿಸು II

11ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ I ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ II

12ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು I ವಿಧೇಯನಾಗಿ ನಡೆವ ಸಿದ್ಧಮನಸ್ಸನು ನೀಡು II

13ಬೋಧಿಸುವೆನಾಗ ನಿನ್ನ ಮಾರ್ಗವನು ದುರುಳರಿಗೆ I ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ II

14ತಪ್ಪಿಸೆನ್ನನು ಸ್ವಾಮಿ ದೇವಾ, ರಕ್ತಾಪರಾಧದಿಂದ I ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತಕಂಠದಿಂದ II

15ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು I ಸಾರುವುದೆನ್ನ ಬಾಯಿ ನಿನ್ನ ನುಡಿಗಳನು II

16ಬಲಿಯರ್ಪಣೆಯಲಿ ನಿನಗೊಲವಿಲ್ಲ I ದಹನ ಬಲಿಯಿತ್ತರು ನಿನಗೆ ಬೇಕಿಲ್ಲ II

17ಮುರಿದ ಮನವೇ [1] ದೇವನೊಲಿವ ಯಜ್ಞವು I ನೊಂದು ಬೆಂದ ಮನವನಾತ ಒಲ್ಲೆಯೆನನು II

18ಸಿಯೋನಿಗೆ ದೇವಾ, ಶುಭವನು ಕರುಣಿಸು I ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು II

19ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು I ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು II