ಹಳೆಯ ಒಡಂಬಡಿಕೆKNCL

ಕೀರ್ತನೆಗಳು 45

1ಉಜ್ವಲಾಲೋಚನೆಯೊಂದು ತುಡುಕುತಿದೆ ಮನದಲಿ I ರಚಿಸಲಿರುವೆ ಮಹಾರಾಜನಿಗೊಂದು ಗೀತಾಂಜಲಿ I ನನ್ನ ಜಿಹ್ವೆ, ಸಜ್ಜಾದ ಬರಹಗಾರನ ಲೇಖನಿ II

2ನರಮಾನವರೊಳು ನೀ ಸುರಸುಂದರ I ನಿನ್ನ ಮುಖವಾಣಿ ಅತ್ಯಂತ ಮಧುರ I ದೇವಾನುಗ್ರಹ ನಿನಗಿದೆ ನಿರಂತರ II

3ಕಟ್ಟಿಕೋ ಶೂರನೇ, ಪಟ್ಟಗತ್ತಿಯನು ಸೊಂಟಕೆ I ಸಂಭ್ರಮ,‍ ಶೋಭೆ, ಸಡಗರ ಸಲ್ಲತಕ್ಕವು ನಿನಗೆ II

4ಹೊರಡು ಒಡ್ಡೋಲಗದಿಂದ ವಾಹನಾರೂಢನಾಗಿ I ತೆರಳು ಭುಜಬಲದಿ ಮಹತ್ಕಾರ್ಯವೆಸಗುವವನಾಗಿ I ಹೆಣಗು ಸತ್ಯಕ್ಕಾಗಿ, ನ್ಯಾಯನೀತಿಪರನಾಗಿ II

5ನಿನ್ನಂಬು ಬಾಣಗಳು ಹರಿತವಾದುವು I ರಾಜದ್ರೋಹಿಗಳನು ಅವು ಇರಿಯುವುವು I ಜನಾಂಗಗಳು ನಿನ್ನ ಪಾದಕ್ಕೆರಗುವುವು II

6ಅಮರವಾದುದು ಹೇ ದೇವಾ, ನಿನ್ನ ಸಿಂಹಾಸನ I ನ್ಯಾಯಸ್ಥಾಪಕವಾದುದು ನಿನ್ನ ರಾಜದಂಡ II

7ಪ್ರೀತಿಸಿದೆ ನೀನು ಧರ್ಮವನು ದ್ವೇಷಿಸಿದೆ ಅಧರ್ಮವನು I ಆನಂದ ತೈಲದಿಂದಭಿಷೇಕಿಸಿಹನು ನಿನ್ನ, ದೇವನು I ಮಿತ್ರರಿಗಿಂತ ಮಿಗಿಲಾಗಿ ಅಭಿಷೇಕಿಸಿಹನು ಆತನು ನಿನ್ನನು II

8ಘಮಘಮಿಸುತಿದೆ ನಿನ್ನುಡಿಗೆ ರಸಗಂಧ, ಅಗರು, ಚಂದನಗಳಿಂದ I ಮನರಂಜನೆಗೊಳ್ಳುತಿರುವೆ ದಂತ ಮಂದಿರದುನ್ನತ ವಾದ್ಯಗಳಿಂದ II

9ರಾಜಕುವರಿಯರಿಹರು ನಿನ್ನ ಸ್ತ್ರೀ ಪರಿವಾರದಲಿ I ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲಿ I ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ II

10ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು I ನಿನ್ನ ಜನರನು, ತೌರು ಮನೆಯನು ಮರೆತುಬಿಡು II

11ಆಗ ಬಯಸುವನು ರಾಜ ನಿನ್ನ ಲಾವಣ್ಯವನು I ಆತನ ಪಾದಕ್ಕೆರಗು, ಆತನೇ ನಿನಗೊಡೆಯನು II

12ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು ಸನ್ಮಾನಿಸುವರು I ಸಿರಿವಂತ ಪ್ರಜೆಗಳು ನಿನ್ನುಪಕಾರವನು ಕೋರಿಬರುವರು II

13ರಾಜಕುವರಿ ವಿರಾಜಿಸುತಿಹಳು ಅಂತಃಪುರದಲಿ I ಮೆರೆಯುತಿಹಳು ಜರತಾರಿ ವಸ್ತ್ರಾಭರಣಗಳಲಿ II

14ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ I ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ II

15ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ I ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ II

16ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ ಸ್ಥಾನವನು I ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ ಜಗದೊಳು II

17ನಿನ್ನ ನಾಮಸ್ಮರಣೆಯನುಳಿಸುವೆನು ಚಿರಕಾಲ I ಹೊಗಳುವರು ಸಕಲ ಜನರು ನಿನ್ನನು ಅನುಗಾಲ II