ಹಳೆಯ ಒಡಂಬಡಿಕೆKNCL

ಕೀರ್ತನೆಗಳು 44

1ಕೇಳಿದೆವು ಕಿವಿಯಾರೆ ದೇವಾ, ನೀ ಎಸಗಿದ ಘನಕಾರ್ಯಗಳನು I ವಿವರಿಸಿಹರು ನಮ್ಮ ಪೂರ್ವಜರು ನಿನ್ನಾ ಮಹತ್ಕಾರ್ಯಗಳನು II

2ಹೊರಗಟ್ಟಿದೆ ಪರಕೀಯರನು, ನಮ್ಮ ಪೂರ್ವಜರ ನೆಲೆಗೊಳಿಸಲು I ವಿನಾಶಗೊಳಿಸಿದೆ ಅನ್ಯರನು, ನಮ್ಮವರನು ವಿಕಾಸಗೊಳಿಸಲು II

3ನಾಡ ಗೆದ್ದುದು ನಮ್ಮವರ ಕತ್ತಿಯಲ್ಲ I ಜಯ ದೊರೆತದು ತಮ್ಮ ಭುಜಬಲದಿಂದಲ್ಲ II ಜಯ ತಂದಿತು ನಿನ್ನ ಬಲಹಸ್ತ, ನಿನ್ನ ಮುಖಕಾಂತಿ I ನಿನ್ನ ಭುಜಬಲ, ನೀ ತೋರಿದಾ ಅಚಲಪ್ರೀತಿ II

4ಯಕೋಬಿಗೆ ವಿಜಯ ಗಿಟ್ಟಿಸಿದಾತ I ನೀನಲ್ಲವೆ ದೇವಾ, ನನ್ನ ಅರಸ? II

5ಶತ್ರುಗಳನು ಸದೆಬಡಿವೆವು ನಿನ್ನ ಬೆಂಬಲದಿಂದ I ಎದುರಾಳಿಯನು ತುಳಿವೆವು ನಿನ್ನ ಆವೇಶದಿಂದ II

6ಬಿಲ್ಲುಬಾಣದಲಿ ನಾ ಭರವಸೆಯಿಡುವುದಿಲ್ಲ I ಕತ್ತಿ ಕಠಾರಿ ನನಗೆ ರಕ್ಷಣೆ ತರುವುದಿಲ್ಲ II

7ಹಿಂಸಕರಿಂದ ಸಂರಕ್ಷಿಸುವಾತ ನೀನೆ I ಹಗೆಗಳಿಗೆ ಆಶಾಭಂಗ ತರುವಾತ ನೀನೆ II

8ನಿನ್ನಲ್ಲಿಯೇ ದೇವಾ, ಹೆಮ್ಮೆಪಡುವೆವು ಸತತ I ನಿನ್ನ ನಾಮವನೆ ಸಂಕೀರ್ತಿಸುವೆವು ನಿರುತ II

9ಆದರೀಗ ನಮ್ಮನು ಕಡೆಗಣಿಸಿರುವೆ, ಕೈ ಬಿಟ್ಟಿರುವೆ I ನಮ್ಮ ಸೇನೆಗಳ ಸಂಗಡ ದೇವ, ಹೊರಟು ಬರದಿರುವೆ II

10ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ ಮಾಡಿರುವೆ I ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ ಬಿಟ್ಟಿರುವೆ II

11ನಮ್ಮನೊಪ್ಪಿಸಿರುವೆ ವಧ್ಯಸ್ಥಾನಕೊಯ್ದ ಕುರಿಗಳಂತೆ I ಚದರಿಸಿಬಿಟ್ಟಿರುವೆ ನಮ್ಮನು ಅನ್ಯ ಜನಾಂಗಗಳ ಮಧ್ಯೆ II

12ಬಿಡುಕಾಸಿಗಿಂತ ಕಡೆಗಾಣಿಸಿರುವೆ ನಿನ್ನ ಪ್ರಜೆಯನು I ಲಾಭವಿಲ್ಲದವರಂತೆ ವಿಕ್ರಯಿಸಿರುವೆ ಅದನು II

13ಪರರು ನಮ್ಮನು ಜರೆಯುವಂತೆ ಮಾಡಿರುವೆ I ನೆರೆಯವರ ಪರಿಹಾಸ್ಯಕ್ಕೆ ಗುರಿಪಡಿಸಿರುವೆ II

14ಅನ್ಯಜನ ನಮ್ಮನಣಕಿಸಿ ತಲೆಯಾಡಿಸುವಂತೆ ಮಾಡಿರುವೆ I ಅನ್ಯಾಯಕ್ಕೆ ಅಡ್ಡಹೆಸರಾಗುವಂತೆ ನಮ್ಮನು ಬಿಟ್ಟಿರುವೆ II

15ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ I ಲಜ್ಜೆಯಿಂದ ನಾ ಮುಖ ಮುಚ್ಚಿಕೊಳ್ಳುವಂತಾಗಿದೆಯಲ್ಲಾ II

16ದೂಷಕರ ನಿಂದೆಗೆ ಆಸ್ಪದನಾದೆ I ದ್ರೋಹಿಗಳ ವಕ್ರನೋಟಕೆ ಗುರಿಯಾದೆ II

17ನಿನ್ನ ಮರೆಯಲಿಲ್ಲ, ನಿನ್ನ ಒಪ್ಪಂದವನು ಮೀರಲಿಲ್ಲ I ಆದರೂ ಒದಗಿವೆಯಲ್ಲ ನಮಗೀ ಅನಾಹುತಗಳೆಲ್ಲ II

18ನಮ್ಮಂತರಂಗ ದೂರವಾಗಿಲ್ಲ ನಿನ್ನಿಂದ I ನಾವು ಅಗಲಲಿಲ್ಲ ನೀನು ತೋರಿದ ಮಾರ್ಗದಿಂದ II

19ಆದರೂ ನಮ್ಮನ್ನು ತಂದು ನಾಯಿನರಿಗಳ ಪಾಲಾಗಿಸಿರುವೆ I ಕಾರ್ಗತ್ತಲೆಮ್ಮನು ಸುತ್ತುವರಿಯುವಂತೆ ಮಾಡಿರುವೆ II

20ನಮ್ಮ ದೇವನ ನಾಮವನು ಮರೆತಿದ್ದೆವಾದರೆ I ಅನ್ಯದೇವರಿಗೆ ನಾವು ಕೈ ಮುಗಿದಿದ್ದೆವಾದರೆ, II

21ದೇವಾ, ನಿನಗದು ಬಯಲಾಗದಿರುತ್ತಿತ್ತೆ? I ನಮ್ಮೆದೆ ಗುಟ್ಟು ನಿನಗೆ ತಿಳಿಯದಿರುತ್ತಿತ್ತೆ? II

22ಎಣಿಕೆಯಾಗಿಹೆವು ಕೊಯ್ಗುರಿಗಳಂತೆ ನಾವೆಲ್ಲ I ಬಲಿಯಾಗುತಿಹೆವು ನಿನ್ನ ನಿಮಿತ್ತವೆ ದಿನವೆಲ್ಲ II

23ಪ್ರಭೂ, ಎದ್ದೇಳು, ನಿದ್ರಿಸಬೇಡ I ನಮ್ಮನು ಎಂದೆಂದಿಗೂ ತೊರೆಯಬೇಡ II

24ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು? I ಮರೆತಿರುವೆಯೇಕೆ ನಮ್ಮ ಹಿಂಸೆ ಬಾಧೆಯನು? II

25ಮಣ್ಣುಪಾಲಾಗಿದೆ ನಮ್ಮ ಪ್ರಾಣ I ನೆಲ ಕಚ್ಚಿಕೊಂಡಿದೆ ನಮ್ಮ ದೇಹ II

26ಎದ್ದು ಬಂದು ಪ್ರಭು ನಿನ್ನ ನೆರವನ್ನೊದಗಿಸು I ನಿನ್ನಚಲ ಪ್ರೇಮದಿಂದ ನಮ್ಮನು ಉದ್ಧರಿಸು II