ಹಳೆಯ ಒಡಂಬಡಿಕೆKNCL

ಕೀರ್ತನೆಗಳು 41

1ದಿಕ್ಕಿಲ್ಲದವನನು ಲಕ್ಷಿಸುವವನು ಧನ್ಯನು I ಆಪತ್ಕಾಲದಲಿ ಆದವನನು ಪ್ರಭು ರಕ್ಷಿಸುವನು II

2ಅಂಥವನನು ಪ್ರಭು ಜೀವದಿಂದಿರಿಸುವನು, ಸುರಕ್ಷಿತವಾಗಿಡುವನು I ನಾಡಿನಲ್ಲವನನು ಧನ್ಯನಾಗಿಸುವನು, ಶತ್ರುಗಳಿಗಧೀನನಾಗಿಸನು II

3ರೋಗದಿ ಹಾಸಿಗೆ ಹಿಡಿದಿರಲು ಪ್ರಭು ಸುಧಾರಿಸುವನು I ರೋಗ ನಿವಾರಿಸಿ ಅವನಿಗೆ ಆರೋಗ್ಯವನೀಯುವನು II

4ನಾನಂತು, “ಪ್ರಭೂ ಕರುಣಿಸು, ಗುಣಪಡಿಸೆನ್ನನು I ನಿನಗೆ ವಿರುದ್ಧ ಪಾಪಗೈದೆ” ಎಂದು ಬೇಡುವೆನು II

5“ಇವನ ಸಾವೆಂದು? ಇವ ನಿರ್ನಾಮವಾಗುವದೆಂತು?” I ನನಗೆ ಕೇಡು ಬಯಸುವವರ ಕುಹಕ ನುಡಿಯಿದು II

6ನೋಡಬರುವರು, ನವಿರಾದ ಮಾತನಾಡುವರವರು I ಕೇಡನೆ ತುಂಬಿಸಿಕೊಂಡು ಹೊರಬಂದೊಡನೆ ಹರಡುವರು II

7ಹಗೆಯವರು ಎನಗೆ ವಿರುದ್ಧ ಗುಜುಗುಟ್ಟುತಿಹರು I ಅವರೆಲ್ಲರು ಎನಗೆ ಕೇಡನೆ ಕಲ್ಪಿಸುತಿಹರು: II

8“ಹಾಸಿಗೆಯಿಂದವನು ಮರಳಿ ಏಳುವಂತಿಲ್ಲ I ಘಾಸಿ ರೋಗದಿಂದ ವಾಸಿಯಾಗುವಂತಿಲ್ಲ” II

9ನನ್ನಾಪ್ತಮಿತ್ರನು, ನನ್ನ ನಂಬಿಕೆಗೆ ಪಾತ್ರನು I ನನ್ನೊಡನೆ ಉಂಡವನು, ನನಗೆರಡು ಬಗೆದಿಹನು II

10ನೀನಾದರೋ ಪ್ರಭು ಕರುಣಿಸು, ಏಳ ಮಾಡೆನ್ನನು I ನಾನವರಿಗಾಗಿ ಮುಯ್ಯಿಗೆ ಮುಯ್ಯಿ ತೀರಿಸುವೆನು II

11ವಿರೋಧಿಗಳೆನ್ನ ಮೇಲೆ ಜಯಗೊಳ್ಳದಂದು I ಅರಿತುಕೊಳ್ವೆನು ನಿನ್ನೊಲುಮೆ ನನಗಿದೆಯೆಂದು II

12ನಿರ್ದೋಷಿಯಾದೆನ್ನನು ನೀನುದ್ಧರಿಸುವೆ I ಚಿರಕಾಲ ನಿನ್ನ ಸನ್ನಿಧಿಯಲ್ಲೆನ್ನನು ಇರಿಸುವೆ II

13ಇಸ್ರಯೇಲರ ದೇವರಾದ ಪ್ರಭುವಿಗೆ ಜಯ I ಯುಗಯುಗಾಂತರಕು ಆಮೆನ್ ಆಮೆನ್, ಜಯಜಯ II