ಹಳೆಯ ಒಡಂಬಡಿಕೆKNCL

ಕೀರ್ತನೆಗಳು 3

1ಪ್ರಭೂ, ನನಗೆ ವಿರೋಧಿಗಳು ಅನೇಕ I ನನಗೆದುರಾಗಿ ನಿಂತವರು ಅತ್ಯಧಿಕ II

2“ಈತನಿಗೆ ದೇವರ ನೆರವೆನಿತು?” I ಇಂತಿದೆ ಹಲವರ ಕೆಣಕು ಮಾತು II

3ನೀನಾದರೋ ಪ್ರಭು, ನನಗೆ ರಕ್ಷೆ, ವಿಜಯದಾತ I ನಾನು ತಲೆಯೆತ್ತಿ ನಡೆಯುವಂತೆ ಮಾಡುವಾತ II

4ಸ್ವರವೆತ್ತಿ ಎನ್ನ ಪ್ರಭುವಿಗೆ ನಾ ಮೊರೆಯಿಡುವೆನು I ಸಿರಿಶಿಖರದಿಂದಾತನು ಸದುತ್ತರ ನೀಡುವನು II

5ಹಾಯಾಗಿ ಮಲಗಿ ನಿದ್ರಿಸುವೆನು I ಸುಖಿಯಾಗಿ ಮರಳಿ ಎದ್ದೇಳುವೆನು I ಕಾಯ್ದು ಕಾಪಾಡುವನು ಪ್ರಭು ನನ್ನನು II

6ಶತ್ರುಗಳು ಸಾವಿರಾರಿದ್ದರೂ ನಾನವರಿಗಂಜೆನು II ಸುತ್ತುವರಿದು ಸನ್ನದ್ಧರಾಗಿದ್ದರೂ ಭಯಪಡೆನು II

7ಎದ್ದೇಳು ದೇವ, ಕಾಪಾಡ ಬಾ ಪ್ರಭುವೆ I ವೈರಿಗಳ ದವಡೆ ಬಡಿದವನು ನೀನಲ್ಲವೇ I ದುರುಳರ ಹಲ್ಲುದುರಿಸಿದವನು ನೀನಲ್ಲವೆ? II

8ಜಯ ವಿಜಯ ಲಭಿಸುವುದು ಪ್ರಭುವಿನಿಂದಲೆ I ನಿನ್ನಾಶೀರ್ವಾದವಿರಲಿ, ಪ್ರಭು, ಪ್ರಜೆಯ ಮೇಲೆ II