ಹಳೆಯ ಒಡಂಬಡಿಕೆKNCL

ಕೀರ್ತನೆಗಳು 38

1ಕೋಪದಿಂದೆನ್ನ ಪ್ರಭು, ಬೈಯಬೇಡ I ರೋಷದಿಂದೆನ್ನನು ದಂಡಿಸಲು ಬೇಡ II

2ನಿನ್ನ ಬಾಣಗಳು ನಾಟಿವೆ ನನ್ನೊಳಗೆ I ನಿನ್ನ ಹಸ್ತವು ಎರಗಿದೆ ನನ್ನ ಮೇಲೆ II

3ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ I ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ II

4ಮುಳುಗಿಸಿಬಿಟ್ಟಿವೆ ನನ್ನ ಅಪರಾಧಗಳೆನ್ನನು I ಅಮುಕಿಬಿಟ್ಟಿವೆ ಹೊರಲಾರದ ಹೊರೆಯಂತೆನ್ನನು II

5ಕೀವು ಸೋರಿ ನಾರುತ್ತಿವೆ ನನ್ನ ಪಾಪದ ಗಾಯಗಳು I ಇದಕ್ಕೆಲ್ಲ ಕಾರಣವು ನನ್ನ ಮೂರ್ಖತನವು II

6ಬಾಗಿ ಕುಗ್ಗಿಹೋಗಿರುವೆ ಪ್ರಭು ಬಹಳವಾಗಿ I ದಿನವೆಲ್ಲ ಅಲೆಯುತ್ತಿರುವೆ ದುಃಖಭರಿತನಾಗಿ II

7ಉರಿಬಡಿದಂತಿದೆ ಎನ್ನ ಸೊಂಟಕೆ I ಆರೋಗ್ಯವಿಲ್ಲದಿದೆ ದೇಹಕೆ II

8ಜೋಮು ಹಿಡಿದಂತಿದೆ, ಜೀವ ಹಿಂಡಿದಂತಿದೆ I ಹೃದಯವೇದನೆಯಿಂದ ನರಳಾಡುತ್ತಿರುವೆ II

9ನನ್ನ ಗೋಳಾಟ ಪ್ರಭು, ನಿನಗೆ ಗೊತ್ತಿದೆಯಯ್ಯಾ I ನನ್ನ ಮನದಾಸೆ ನಿನಗೆ ಬಯಲಾಗಿದೆಯಯ್ಯಾ II

10ಬಡಿದುಕೊಳ್ಳುತಿದೆ ಹೃದಯ, ಹುದುಗಿಹೋಗಿದೆ ಚೇತನ I ಮಬ್ಬಾಗಿ ಹೋಗಿದೆ ನನ್ನೆರಡು ನಯನಸಾಧನ II

11ನನ್ನ ಜಾಡ್ಯ ನೋಡಿ ದೂರ ಸರಿದರು ನೆಂಟರಿಷ್ಟರು I ಬಳಿಬಾರದೆ ಅಲ್ಲೇ ನಿಂತರು ಬಂಧು ಬಳಗದವರು II

12ಉರಲನೊಡ್ಡಿಹರು ನನ್ನ ಪ್ರಾಣಹಂತಕರು I ನಿರ್ಧರಿಸಿಹರು ವಿನಾಶವನ್ನು ಕೇಡು ಬಗೆವವರು I ಕುತಂತ್ರವ ಮಾಡುವರು ಸತತ ಮೋಸಗಾರರು II

13ನಾನಂತು ಕೇಳದಿದ್ದೆ ಕಿವುಡನಂತೆ I ಮರು ಉತ್ತರಿಸದೆ ಮೌನವಿದ್ದೆ ಮೂಕನಂತೆ II

14ಅಹುದಹುದು ಕಿವಿ ಕೇಳಿಸದವನಂತಿದ್ದೆ I ಪ್ರತ್ಯುತ್ತರ ಕೊಡಲಾಗದವನಂತಿದ್ದೆ II

15ನಿನಗಾಗಿ ಪ್ರಭು, ಕಾದಿರುವೆನಯ್ಯಾ I ನನಗಾಗಿ ನೀ ಉತ್ತರಿಸೋ, ದೇವಾ II

16ಶತ್ರುಗಳು ಹರ್ಷಿಸಬಾರದು ನನ್ನ ವಿಷಯದಲಿ I ಹಿಗ್ಗಬಾರದವರು ನಾ ಜಾರಿ ಬಿದ್ದಲ್ಲಿ II

17ಇಗೋ, ನಾನೆಡವಿ ಬೀಳಲಿರುವೆ I ಆಪತ್ತಿಗಾಗಿ ಸಂಕಟಪಡುತ್ತಿರುವೆ II

18ನಾನಪರಾಧಿಯೆಂದು ನಿವೇದಿಸುವೆ I ಪಾಪಕ್ಕಾಗಿ ಪಶ್ಚಾತ್ತಾಪ ಪಡುವೆ II

19ಬಲಿಷ್ಠ ವೈರಿಗಳು ವಿರೋಧಿಸುತಿಹರು ನಿಷ್ಕಾರಣವಾಗಿ I ಶತ್ರುಗಳನೇಕರು ದ್ವೇಷಿಸುತಿಹರು ಅನ್ಯಾಯವಾಗಿ II

20ಎಸಗಿಹರು ಉಪಕಾರಕೆ ಪ್ರತಿಯಾಗಿ ಅಪಕಾರ I ಎದುರಿಸುತಿಹರೀಗ ನಾ ಹಿಡಿದಿರುವ ಸನ್ಮಾರ್ಗ II

21ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ I ದೇವಾ, ನನಗೆ ದೂರವಾಗಬೇಡಯ್ಯಾ II

22ಓ ಪ್ರಭುವೇ, ನನ್ನುದ್ಧಾರಕನೆ, I ನನಗೆ ನೆರವಾಗಲು ಬಾ ಬೇಗನೆ II