ಹಳೆಯ ಒಡಂಬಡಿಕೆKNCL

ಕೀರ್ತನೆಗಳು 37

1ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ I ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ II

2ಅವರು ಒಣಗಿಹೋಗುವರು ಕಾಡುಗರಿಕೆಯಂತೆ I ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ II

3ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು I ಸುರಕ್ಷಿತನಾಗಿ ಬಾಳು ಸಿರಿನಾಡಿನಲ್ಲಿದ್ದು II

4ಪ್ರಭುವಿನಿಂದಲೆ ಬಯಸು ನಿನ್ನಾನಂದವನು I ನೆರವೇರಿಸುವನಾತ ನಿನ್ನ ಮನದಾಸೆಯನು II

5ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I ಭರವಸೆಯಿಂದಿರು, ಆತನದನು ಸಾಗಿಸುವನು II

6ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ I ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ II

7ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II

8ಅಡಗಿಸು ಕೋಪವನು; ವರ್ಜಿಸು ಕ್ರೋಧವನು I ಕಿಡಿಕಿಡಿಯಾಗಬೇಡ, ತರುವುದದು ಕೇಡನು II

9ವಧಿತರಾಗಿ ನಾಶವಾಗುವರು, ಕೇಡು ಮಾಡುವವರು I ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು II

10ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II

11ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ I ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ II

12ದುರ್ಜನನು ಹೂಡಿಹನು ಒಳಸಂಚು ಸಜ್ಜನನ ವಿರುದ್ಧ I ಕಟಕಟನೆ ಹಲ್ಲು ಕಡಿಯುತಿಹನಿದೋ ಆತನ ವಿರೋಧ II

13ಅಂಥವನ ಕಂಡು ಪ್ರಭು ನಸುನಗುತಿಹನು I ಅವನಿಗೊದಗಲಿಹ ಗತಿಯನು ಕಾಣುತಿಹನು II

14ಹಿಡಿದಿಹರು ದುರುಳರು ಕತ್ತಿಯನು, ಎತ್ತಿಹರು ಬಿಲ್ಲನು I ಕೆಡಹಲು ದೀನದಲಿತರನು, ಕೊಲ್ಲಲು ಸಜ್ಜನರನು II

15ಹಿಡಿದ ಕತ್ತಿ ಹಿಡಿದವರೆದೆಯನೆ ಇರಿವುದು I ಎತ್ತಿದ ಬಿಲ್ಲುಬಾಣ ಸಿಡಿದು ಮುರಿವುದು II

16ದುರುಳರ ವಿಪುಲ ಆಸ್ತಿಪಾಸ್ತಿಗಿಂತಲು I ಸತ್ಯವಂತರ ಬಡತನವೆನಿತೊ ಮಿಗಿಲು II

17ಬತ್ತಿಹೋಗುವುದು ದುರ್ಜನರ ಭುಜಬಲ I ಸತ್ಯವಂತರಿಗೆ ಪ್ರಭುವೇ ಉನ್ನತಬಲ II

18ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ I ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ II

19ಮಾನನಷ್ಟವಿರದು ಕಷ್ಟಕಾಲದಲಿ I ಕುಂದುಕೊರತೆಯಿರದು ಬರಗಾಲದಲಿ II

20ದುರುಳರ ಬೆಡಗೋ ಬಾಡಿಹೋಗುವುದು ಹುಲ್ಲಿನಂತೆ I ಪ್ರಭುವಿನ ಶತ್ರುಗಳು ತೇಲಿಹೋಗುವರು ಹೊಗೆಯಂತೆ II

21ಕೊಂಡ ಸಾಲವನು ತೀರಿಸಲಾರನಾ ದುರ್ಜನನು I ಉದಾರವಾಗಿ ದಾನ ಧರ್ಮಮಾಳ್ಪನಾ ಸಜ್ಜನನು II

22ಪ್ರಭುವಿನಿಂದ ಆಶೀರ್ವದಿತರು ನಾಡಿಗೆ ಬಾಧ್ಯಸ್ಥರು I ಆತನಿಂದ ಶಾಪಗ್ರಸ್ಥರು ಬಹಿಷ್ಕೃತರು II

23ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ I ಅವನ ನಡತೆಗೆ ಆತನೆ ಮಾರ್ಗದರ್ಶನ II

24ಬಿದ್ದರೂ ಅವನೆದ್ದೇ ತೀರುವನು I ಪ್ರಭು ಅವನಿಗೆ ಊರುಗೋಲಾಗಿಹನು II

25ಸಜ್ಜನ ದಿಕ್ಕಿಲ್ಲದಿರುವುದನು, ಅವನ ಸಂತತಿ ಭಿಕ್ಷೆ ಬೇಡುವುದನು I ನಾ ಕಾಣೆನು, ವೃದ್ಧ ನಾನೆಂದೂ ಕಾಣೆನು, ಬಾಲ್ಯದಿಂದ ಕಾಣೆನು II

26ದಾನ ನೀಡುವನು, ಸಾಲ ನಿರಾಕರಿಸನು ಸಜ್ಜನನು I ಆತನ ಸಂತಾನ ಹೊಂದುವುದು ಆಶೀರ್ವಾದವನು II

27ಕೆಟ್ಟದನು ಬಿಡು, ಒಳ್ಳೆಯದನು ಮಾಡು I ಸಿರಿನಾಡಿನಲಿ ಚಿರಕಾಲ ಬಾಳು II

28ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು I ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು II

29ಸಜ್ಜನರು ಸಿರಿನಾಡಿಗೆ ಬಾಧ್ಯಸ್ಥರು I ಅಲ್ಲವರು ಶಾಶ್ವತವಾಗಿ ಬಾಳುವರು II

30ಸಜ್ಜನರ ಬಾಯಿ ಆಡುವುದು ಸುಜ್ಞಾನವನು I ಅವನ ನಾಲಿಗೆ ನುಡಿಯುವುದು ನ್ಯಾಯನೀತಿಯನು II

31ಅವನ ಎದೆಯಲ್ಲಿದೆ ದೇವರ ನಿಯಮ I ನೆಲೆತಪ್ಪದು ಅವನ ನಡತೆಯ ಕ್ರಮ II

32ದುಷ್ಟನಿಟ್ಟಿರುವನು ಕಣ್ಣನು ಸಜ್ಜನರ ಮೇಲೆ I ಹೊಂಚುಹಾಕಿ ನೋಡುತಿಹನು ಮಾಡಲವರ ಕೊಲೆ II

33ಪ್ರಭು ಬಿಡನವನನು ದುಷ್ಟ ಶಕ್ತಿಯ ವಶಕ್ಕೆ I ಗುರಿಪಡಿಸನು ನ್ಯಾಯಸ್ಥಾನದ ಶಿಕ್ಷೆಗೆ II

34ಪ್ರಭುವನು ನಂಬಿ ನಡೆ ಆತನ ಪಥದಲೇ I ಉದ್ಧಾರವಾಗುವೆ, ನಾಡಿಗೊಡೆಯನಾಗುವೆ I ದುಷ್ಟರ ವಿನಾಶವನು ಕಣ್ಣಾರೆ ಕಾಣುವೆ II

35ದುರುಳನೋರ್ವ ಮಹಾಗರ್ವದಿಂದ ಬಾಳುತ್ತಿದ್ದ I ಹುಲುಸಾಗಿ ಬೆಳೆದ ದೇವದಾರು ಮರದಂತಿದ್ದ II

36ಕ್ರಮೇಣ ನಾನು ಆ ಮಾರ್ಗವಾಗಿ ನಡೆಯಲು I ಕಾಣಲಿಲ್ಲ, ಗುರುತೂ ಇರಲಿಲ್ಲ ಹುಡುಕಲು II

37ನಿರಪರಾಧಿಯನ್ನು ಲಕ್ಷಿಸು, ಸತ್ಪುರುಷನನು ವೀಕ್ಷಿಸು I ಶಾಂತಿಪ್ರಿಯನಿಗಿದೆ ಸಂತಾನವೃದ್ಧಿ, ಇದ ಗಮನಿಸು II

38ನಾಶವಾಗುವುದು ನಿಜ, ದೋಷಿಗಳ ಮನೆತನ I ನಿರ್ಮೂಲವಾಗುವುದು ದುರುಳರ ಸಂತಾನ II

39ಸಜ್ಜನರ ಜೀವೋದ್ಧಾರ ಪ್ರಭುವಿನಿಂದ I ಆಪತ್ಕಾಲದಲಿ ಆಶ್ರಯ ಆತನಿಂದ II

40ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು I ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು II