ಹಳೆಯ ಒಡಂಬಡಿಕೆKNCL
1ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು I ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು II
2ಪ್ರಭುವಿನಲ್ಲಿದೆ ನನ್ನ ಮನದಭಿಮಾನ I ದೀನರಿದನು ಕೇಳಿ, ಪಡೆಯಲಿ ಸುಮ್ಮಾನ I
3ಬನ್ನಿ, ಕೊಂಡಾಡುವ ಪ್ರಭು ದೇವನನು II ಘನಪಡಿಸೋಣ ಅವನ ಶ್ರೀನಾಮವನು II
4ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು I ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು II
5ಆತನತ್ತ ತಿರುಗಿದ ಮುಖ ಅರಳುವುದು I ಲಜ್ಜೆಯಿಂದೆಂದಿಗು ಕುಂದಿಹೋಗದು II
6ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು I ಸರ್ವಾಪತ್ತಿನಿಂದವನು ಮುಕ್ತಗೊಂಡನು II
7ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I ಕಾಯುವನು ಪ್ರಭುವಿನ ದೂತನೆ ಬಂದಿಳಿದು II
8ಸವಿದು ನೋಡು ಪ್ರಭುವಿನ ಮಾಧುರ್ಯವನು I ಆತನನು ಆಶ್ರಯಿಸಿಕೊಂಡವನು ಧನ್ಯನು II
9ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ I ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ II
10ಯುವ ಕೇಸರಿಗೆ ಇರಬಹುದು ಹಸಿವು, ದಾಹ I ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ II
11ಬನ್ನಿ ಮಿತ್ರರೇ, ಆಲಿಸಿರೀ ಮಾತನು I ಕಲಿಸುವೆನು ನಾ ನಿಮಗೆ ದೇವ ಭಯವನು II
12ಎಲೆ ಮಾನವ, ಬಲುದಿನ ಬಾಳಲು ಬಯಸುವೆಯಾ? I ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? II
13ಕಾದಿಡು ನಾಲಿಗೆಯನು ಕೇಡನು ಆಡದಂತೆ I ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ II
14ಬಿಡು ಕೆಟ್ಟದನು, ಮಾಡು ಒಳ್ಳಿತನು I ಹುಡುಕು ಶಾಂತಿಯನು, ಬೆನ್ನಟ್ಟು ಅದನು II
15ಸಜ್ಜನರನು ಪ್ರಭು ಕಟಾಕ್ಷಿಸುವನು I ಅವರ ಮೊರೆಗಾತ ಕಿವಿಗೊಡುವನು II
16ದುರ್ಜನರಿಗಾದರೋ ಪ್ರಭು ವಿಮುಖನು I ಅವರ ಹೆಸರನು ಧರೆಯಿಂದ ಅಳಿಸುವನು II
17ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ I ನೆರವೀವನವರ ಕಷ್ಟನಿವಾರಣೆಗೆ II
18ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ I ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ II
19ಸಜ್ಜನನಿಗೊದಗುವ ಸಂಕಟಗಳು ವಿಪರೀತ I ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ II
20ಕಾಪಾಡುವನು ಅವನೆಲಬುಗಳೆಲ್ಲವನ್ನೂ I ಮುರಿಯಬಿಡನು ಪ್ರಭು ಅವುಗಳಲ್ಲೊಂದನ್ನೂ II
21ದುರ್ಜನರೆಲ್ಲರೂ ತುತ್ತಾಗುವರು ತಮ್ಮ ಕೇಡಿಗೆ I ಸಜ್ಜನರ ಶತ್ರುಗಳು ಗುರಿಯಾಗುವರು ದಂಡನೆಗೆ II
22ತನ್ನ ದಾಸರನು ಉದ್ಧಾರಮಾಡದಿರನು ಪ್ರಭು I ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು II