ಹಳೆಯ ಒಡಂಬಡಿಕೆKNCL

ಕೀರ್ತನೆಗಳು 33

1ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ I ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ II

2ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ I ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ II

3ನೂತನ ಕೀರ್ತನೆಯನು ಆತನಿಗೆ ಹಾಡಿರಿ I ಇಂಪಾಗಿ ಬಾರಿಸಿ, ಸೊಂಪಾಗಿ ಭಜಿಸಿರಿ II

4ಸತ್ಯವಾದುದು ಆತನ ಪವಿತ್ರ ವಾಕ್ಯ I ಸ್ತುತ್ಯವಾದುದು ಆತನ ಪುನೀತ ಕಾರ್ಯ II

5ಸತ್ಯಸಂಧನು, ನ್ಯಾಯಪ್ರಿಯನು ಆತನು I ಅಚಲಪ್ರೀತಿಯಿಂದ ಜಗವನು ತುಂಬಿಹನು II

6ಸೃಷ್ಟಿಯಾಯಿತು ಗಗನ ಮಂಡಲ ಆತನ ನುಡಿಯೊಂದಕೆ I ರೂಪುಗೊಂಡಿತು ತಾರಾ ಮಂಡಲ ಅವನುಸಿರು ಮಾತ್ರಕೆ II

7ತುಂಬಿಟ್ಟಿಹನು ಜಲರಾಶಿಗಳನು ಕಡಲೆಂಬ ಕುಡಿಕೆಯಲಿ I ಕೂಡಿಟ್ಟಿಹನು ಜಲಾಶಯಗಳನು ಬುವಿಯುಗ್ರಾಣದಲಿ II

8ಪೊಡವಿಯೆಲ್ಲವು ಭಯಪಡಲಿ ಪ್ರಭುವಿಗೆ I ಅಡಗಿ ನಡೆಯಲಿ ನಾಡಿಗರೆಲ್ಲ ಆತನಿಗೆ II

9ಸೃಷ್ಟಿಯಾಯಿತು ಆತನ ನುಡಿ ಮಾತ್ರಕೆ I ಸ್ಥಾಪನೆಯಾಯಿತು ಅವನ ಅಣತಿಯೊಂದಕೆ II

10ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನೆಗಳನು I ನಿರರ್ಥಕವಾಗಿಪನು ಜನರ ದುಷ್ಟಸಂಕಲ್ಪಗಳನು II

11ಪ್ರಭುವಿನ ಯೋಜನೆ ಶಾಶ್ವತ I ಅವನ ಸಂಕಲ್ಪ ಅನವರತ II

12ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ I ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ II

13ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ I ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ II

14ಸ್ಥಾವರ ಸಿಂಹಾಸನದಿಂದ ನೋಡುತಿಹನು I ಸರ್ವ ಭೂನಿವಾಸಿಗಳನು ಪರಿಶೀಲಿಸುತಿಹನು II

15ಅವರೆಲ್ಲರ ಹೃದಯಗಳನು ನಿರ್ಮಿಸಿದಾತನವನು I ಅವರವರ ಕೃತ್ಯಗಳನು ಪರೀಕ್ಷಿಸುತಿಹನು II

16ಅರಸನಾವನು ವಿಜೇತನಾಗನು ಮಹಾ ಸೇನಾಬಲದಿಂದಲೆ I ಶೂರನಾವನು ಜಯಶೀಲನಾಗನು ಕೇವಲ ಭುಜಬಲದಿಂದಲೆ II

17ಪ್ರಾಣರಕ್ಷಣೆಗೆ ಸಾಲದು ಅಶ್ವದಳ I ಆತ್ಮರಕ್ಷಣೆಗೆ ಬಾರದು ಅಶ್ವಬಲ II

18ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II

19ತಪ್ಪಿಸುವನವನು ಪ್ರಾಣವನು ಮರಣದಿಂದ I ಉಳಿಸುವನು ಜೀವವನು ಕ್ಷಾಮಡಾಮರದಿಂದ II

20ಕಾದಿದೆ ಎನ್ನ ಮನ ಪ್ರಭುವಿಗಾಗಿ I ಆತನಿಹನು ಎನಗೆ ಗುರಾಣಿಯಾಗಿ II

21ನೆಮ್ಮದಿಯಿಂದಿದೆ ಎನ್ನ ಮನ ಆತನಲಿ I ನಂಬಿರುವೆವು ಆತನ ಶ್ರೀ ನಾಮದಲಿ II

22ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ I ಕಾದಿಹೆವು ಇದೋ ನಿನ್ನ ನಂಬಿ ಭರವಸದಿ II