ಹಳೆಯ ಒಡಂಬಡಿಕೆKNCL
1ಸಾಚವಾದುದೆನ್ನ ನಡತೆ, ಅಚಲವಾದುದೆನ್ನ ನಂಬುಗೆ I ನೀಚ ನಾನಲ್ಲವೆಂದು ಪ್ರಭು, ನ್ಯಾಯ ತೀರಿಸೆನಗೆ II
2ಪರೀಕ್ಷಿಸು ಪ್ರಭು, ಎನ್ನನು ಪರಿಶೀಲಿಸು I ಹೃನ್ಮನಗಳೆಲ್ಲವನು ನೀ ಪರಿಶೋಧಿಸು II
3ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ I ನೀ ತೋರಿದ ಸತ್ಯಪಥದಲಿ, ನಾ ನಡೆದೆ II
4ದುಷ್ಟರ ಕೂಟದಲಿ ನಾ ಕೂರುವವನಲ್ಲ I ಕಪಟಿಗಳ ಸಂಘವನು ನಾ ಸೇರುವವನಲ್ಲ II
5ದುರ್ಜನರ ಸಹವಾಸವದು ನನಗಸಹ್ಯ I ದುರುಳರೊಡನಾಟ ನನಗೆ ಬೇಡವಯ್ಯಾ II
6ನಿರ್ದೋಷಿ ನಾನೆಂದು ನೀರಿನಲ್ಲಿ ಕೈತೊಳೆವೆನಯ್ಯಾ I ಪ್ರಭು, ನಿನ್ನ ಬಲಿಪೀಠದ ಪ್ರದಕ್ಷಿಣೆ ಮಾಡುವೆನಯ್ಯಾ II
7ದನಿಯೆತ್ತಿ ನಿನಗೆ ಧನ್ಯಗೀತೆ ಹಾಡುವೆನಯ್ಯಾ I ನಿನ್ನದ್ಭುತ ಕಾರ್ಯಗಳೆಲ್ಲವನು ಘೋಷಿಸುವೆನಯ್ಯಾ II
8ಪ್ರಿಯವಾದುದೆನಗೆ ನಿನ್ನ ನಿವಾಸದ ಮಂದಿರ I ಸುಪ್ರೀತವಾದುದು ನಿನ್ನ ಮಹಿಮೆಯ ಆಗರ II
9ಪಾಪಿಗಳ ಸಮೇತ ಎನ್ನ ಪ್ರಾಣವನಳಿಸಬೇಡಯ್ಯಾ I ಕೊಲೆಪಾತಕರ ಸಮೇತ ಎನ್ನ ಜೀವ ತೆಗೆಯಬೇಡಯ್ಯಾ II
10ಇದೆ ಆ ಜನರ ಕೈಗಳಲಿ ಕೆಡುಕನ I ಬಲಗೈ ತುಂಬ ಲಂಚಕೋರತನ II
11ನೀತಿಯ ಪಥದೊಳು ನಾ ನಡೆವೆನಯ್ಯಾ I ಕರುಣೆ ತೋರುತ ಪ್ರಭು, ರಕ್ಷಿಸಯ್ಯಾ II
12ಸಮತಳದಲಿ ನಿಂತಿವೆ ನನ್ನ ಪಾದಗಳು I ಸ್ತುತಿಸುವೆ ನಾ ಪ್ರಭುವನು ಭಕ್ತರ ಸಭೆಯೊಳು II