ಹಳೆಯ ಒಡಂಬಡಿಕೆKNCL

ಕೀರ್ತನೆಗಳು 25

1ಎತ್ತಿರುವೆ ಪ್ರಭೂ, ಹೃನ್ಮನಗಳನು ನಿನ್ನತ್ತ I ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ II

2ಶತ್ರುಗಾಗದಿರಲಿ ಸಡಗರ I ನನಗೊದಗದಿರಲಿ ಮುಜುಗರ II

3ಆಗಲಿ ಆಶಾಭಂಗ ನಿನ್ನೆದುರಾಳಿಗಳಿಗೆ I ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ II

4ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು I ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು II

5ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ I ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ II

6ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I ಆದಿಯಿಂದ ನೀ ತೋರಿದಚಲ ಪ್ರೀತಿಯನು II

7ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II

8ಸತ್ಯಸ್ವರೂಪನು, ದಯಾವಂತನು ಪ್ರಭು I ದಾರಿತಪ್ಪಿದವರಿಗೆ ಬೋಧಕನು ವಿಭು II

9ದೀನರನು ನಡೆಸುವನು ತನ್ನ ವಿಧಿಗನುಸಾರ I ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ II

10ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ I ಆತನ ವಿಧಿ ನಿಬಂಧನೆಗಳ ಪರಿಪಾಲಕರಿಗೆ ಅವುಗಳು ಸುಪ್ರೀತ II

11ನಿನ್ನ ನಾಮದ ನಿಮಿತ್ತ ನನ್ನನು ಈಕ್ಷಿಸು I ಎನ್ನ ಘೋರ ಪಾಪವನು ಪ್ರಭು ಕ್ಷಮಿಸು II

12ಪ್ರಭುವಿನ ಭಯಭಕುತಿಯುಳ್ಳವನಿಗೆ I ಲಭಿಪುದು ಖಚಿತ ಋಜುಮಾರ್ಗದ ಕಲಿಕೆ II

13ಬಾಳುವನಂಥವನು ಸುಖಸೌಭಾಗ್ಯದಿಂದ I ಬದುಕುವುದವನ ಸಂತತಿ ನಾಡಿನೊಡೆತನದಿಂದ II

14ಪ್ರಭುವಿನ ಮೈತ್ರಿ, ಭಯಭಕುತಿಯುಳ್ಳವರಿಗೆ I ಅಂಥವರಿಗೆ ವ್ಯಕ್ತ, ಆತನ ಒಡಂಬಡಿಕೆ II

15ತಿರುಗಿದೆ ಎನ್ನ ನಯನ ಪ್ರಭುವಿನತ್ತ I ಉರುಲಿಂದ ಕಾಲನು ಕಳಚಿದನಾತ II

16ಒಬ್ಬೊಂಟಿಗನಾದೆ, ಸಿಕ್ಕಿಕೊಂಡೆ ಸಂಕಟಕೆ I ಕಟಾಕ್ಷಿಸೋ ಪ್ರಭು, ಕರುಣೆತೋರೋ ತಬ್ಬಲಿಗೆ II

17ನಿವಾರಿಸೆನ್ನ ಮನಕ್ಲೇಶವನು I ಪರಿಹರಿಸೆನ್ನ ದುಃಖದುಗುಡವನು II

18ನೋಡೆನ್ನ ಬಾಧೆ ಬವಣೆಗಳನು I ತೊಡೆದು ಹಾಕೆನ್ನ ಪಾಪಗಳನು II

19ಶತ್ರುಗಳಿಹರು ನೋಡು ಸಹಸ್ರಾರು I ಕ್ರೋಧದಿಂದೆನ್ನ ಹಗೆ ಮಾಡುತಿಹರು II

20ಕಾಪಾಡು ಪ್ರಭು, ರಕ್ಷಿಸೆನ್ನ ಪ್ರಾಣವನು I ನಿರಾಶೆಗೊಳಿಸಬೇಡ, ಶರಣಾಗತನು ನಾನು II

21ನಿರ್ದೋಷ, ನಿಷ್ಕಪಟ ನಡತೆ ನನಗೆ ರಕ್ಷೆ I ನೀನೆ ಪ್ರಭು ನನಗಿರುವ ದೃಢ ನಿರೀಕ್ಷೆ II

22ಉದ್ಧರಿಸು ದೇವಾ, ಇಸ್ರಯೇಲರನು I ಸಮಸ್ತ ಬೇನೆ ಬವಣೆಗಳಿಂದವರನು II