ಹಳೆಯ ಒಡಂಬಡಿಕೆKNCL

ಕೀರ್ತನೆಗಳು 21

1ಅರಸಗೆ ಹರ್ಷವಾಯಿತು ಪ್ರಭು, ನೀ ತೋರಿದ ಪರಾಕ್ರಮಕ್ಕಾಗಿ I ಪರಮಾನಂದಗೊಂಡನವನು, ನೀನಿತ್ತ ವಿಜಯೋತ್ಸವಕ್ಕಾಗಿ II

2ಆತನ ಮನದಾಸೆಯನು ನೀ ಪೂರೈಸಿದೆ I ಆತನಧರ ಬಯಕೆಯನು ಅನುಗ್ರಹಿಸಿದೆ II

3ನೀನಾತನನು ಸ್ವಾಗತಿಸಿದೆ ಶುಭಾಶಯದೊಂದಿಗೆ I ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ II

4ಕೋರಿದನಾತನು ಜೀವಮಾನಕಾಲವನು I ನೀನಿತ್ತೆ ಯುಗಯುಗಾಂತರದಾಯುಷ್ಯವನು II

5ನಿನ್ನ ನೆರವಿಂದೇರಿತು ಆತನ ಘನತೆ I ಶೋಭೆ, ಪ್ರಭಾವಗಳ ನೀನವನಿಗಿತ್ತೆ II

6ಅಮರ ಭಾಗ್ಯಗಳನು ನೀನನುಗ್ರಹಿಸಿದೆ I ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ II

7ಅರಸನಿಗಿದೆ ಭರವಸೆ ಪ್ರಭುವಿನಲಿ I ಅವನಚಲನು, ಪರಾತ್ಪರನ ಕೃಪೆಯಲಿ II

8ಶತ್ರುಗಳೆಲ್ಲರು ಸಿಕ್ಕಿಹೋಗುವರು ನಿನ್ನ ಕೈಗೆ I ಹಗೆಗಳೆಲ್ಲ ಸಿಕ್ಕಿಬೀಳುವರು ನಿನ್ನ ಬಲಗೈಗೆ II

9ಅಗ್ನಿಕುಂಡವಾಗುವರವರು ನೀ ಪ್ರತ್ಯಕ್ಷನಾದಾಗ I ಕಬಳಿಸುವುದು ಕೋಪಾಗ್ನಿ, ಭಸ್ಮವಾಗ್ವರು ಪ್ರಭು ಬಂದಾಗ II

10ನಿರ್ಮೂಲಮಾಡುವೆ ನೀನವರ ಸಂತಾನವನು ಧರೆಯಿಂದ I ಕುಡಿಯಿಲ್ಲದಾಗಿಸುವೆ ಅವರನು ಮಾನವರ ಮಧ್ಯದಿಂದ II

11ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು I ಕೇಡನು ನಿನಗೆ ಬಗೆದರೂ ಅದು ಕೈಗೂಡದು II

12ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ I ಬೆನ್ನುಮಾಡಿ ಅವರೋಡುವಂತೆ ಮಾಡುವೆ II

13ಹೇ ಪ್ರಭು, ಪರಾಕ್ರಮ ತೋರಿ, ಪರಮಪದಗಳಿಸಿಕೊ I ಕೀರ್ತಿಸುತ ನಿನ್ನ ಸಾಮರ್ಥ್ಯವನು, ಪೊಗಳುವೆನಿದೊ II