ಹಳೆಯ ಒಡಂಬಡಿಕೆKNCL

ಕೀರ್ತನೆಗಳು 1

1ದುರ್ಜನರ ಆಲೋಚನೆಯಂತೆ ನಡೆಯದೆ I ಪಾಪಾತ್ಮರ ಪಥದಲಿ ಕಾಲೂರದೆ I ಧರ್ಮನಿಂದಕರ ಕೂಟದಲಿ ಕೂರದೆ II

2ಪ್ರಭುವಿನ [1] ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು I ಹಗಲಿರುಳೆನ್ನದೆ ಅದನೆ ಧ್ಯಾನಿಸುತಿರುವವನಾರೋ ಅವನೇ ಧನ್ಯನು II

3ನದಿಯ ಬದಿಯಲೇ ಬೆಳೆದಿಹ ಮರದಂತೆ I ಸಕಾಲಕೆ ಫಲವೀವ ವೃಕ್ಷದಂತೆ I ಎಲೆಬಾಡದೆ ಪಸಿರಿರುವ ತರುವಂತೆ I ಸಿಗುವುದು ಅವನ ಕಾರ್ಯಗಳಿಗೆ ಸಫಲತೆ II

4ದುರುಳರಾದರೊ ತೂರಿ ಹೋಗುವರು I ಬಿರುಗಾಳಿಗೆ ತರಗೆಲೆಯಾಗುವರು II

5ಎಂದೇ ನಿಲ್ಲಲಾರರು ದುರುಳರು ನ್ಯಾಯಸ್ಥಾನದಲಿ I ಸದಸ್ಯರಾಗರು ಪಾಪಿಗಳು ಸಜ್ಜನರ ಸಂಘದಲಿ II

6ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ I ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ II