ಹಳೆಯ ಒಡಂಬಡಿಕೆKNCL
1ಹೊಗಳಿರಿ ಸ್ವರ್ಗದಿಂದ ಪ್ರಭುವನು I ವಂದಿಸಿ ಮಹೋನ್ನತದಲಿ ಆತನನು II
2ಆತನ ಸಮಸ್ತ ದೂತರೇ, ಸ್ತುತಿಸಿ ಆತನನು I ಆತನ ಎಲ್ಲಾ ಗಣಗಳೇ, ಹೊಗಳಿ ಆತನನು II
3ಸೂರ್ಯಚಂದ್ರರೇ, ಹೊಗಳಿ ಆತನನು I ಮಿನುಗುವ ತಾರೆಗಳೇ, ಹೊಗಳಿ ಆತನನು II
4ಉನ್ನತೋನ್ನತ ಆಕಾಶವೇ, ಹೊಗಳು ಆತನನು I ಅದರ ಮೇಲಿನ ಜಲರಾಶಿಗಳೇ, ಹೊಗಳಿ ಆತನನು II
5ಹೊಗಳಲಿ ಪ್ರಭುವಿನ ನಾಮವನು ಇವೆಲ್ಲ I ಆತನ ಅಪ್ಪಣೆಗೆ ಉಂಟಾದವುಗಳೆಲ್ಲ II
6ಸ್ಥಾಪಿಸಿದನು ಎಂದೆಂದಿಗೂ ಅವನ್ನು I ವಿಧಿಸಿಹನು ಮೀರಲಾಗದ ನಿಯಮವನು I
7ತಿಮಿಂಗಲಗಳೂ ಆದಿಸಾಗರಗಳೂ I ಹೊಗಳಲಿ ಭೂಮಂಡಲದಿಂದ ಪ್ರಭುವನು II
8ಕಿಚ್ಚು, ಕಲ್ಮಳೆ, ಹಿಮ, ಹಬೆ ಇವುಗಳೆಲ್ಲವೂ I ಆತ ಹೇಳಿದಂತೆ ಕೇಳುವ ಬಿರುಗಾಳಿಯೂ, II
9ಎಲ್ಲಾ ಬೆಟ್ಟಗಳೂ ಗುಡ್ಡಗಳೂ I ಫಲವೃಕ್ಷಗಳೂ ದೇವದಾರುಗಳೂ II
10ಕಾಡುಮೃಗಗಳು, ಸಾಕುಪ್ರಾಣಿಗಳು I ಕ್ರಿಮಿಕೀಟಗಳು, ಪ್ರಾಣಿಪಕ್ಷಿಗಳು II
11ಭೂರಾಜರು, ಎಲ್ಲ ಜನಾಂಗಗಳು I ಅಧಿಕಾರಿಗಳು, ದೇಶಾಧಿಪತಿಗಳು II
12ಯುವಕರೂ ಯುವತಿಯರೂ I ಮುದುಕರೂ ಮಕ್ಕಳೂ II
13ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು I ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು I ಆತನ ಮಹತ್ತಾದ ಏಕೈಕ ನಾಮವನು II
14ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ I ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ I ತನ್ನ ಆಪ್ತಜನರಾದ ಇಸ್ರಯೇಲರಿಗೆ I ಅಲ್ಲೆಲೂಯ! II