ಹಳೆಯ ಒಡಂಬಡಿಕೆKNCL

ಕೀರ್ತನೆಗಳು 146

1ಪ್ರಭುವಿಗೆ ಸ್ತುತಿಸ್ತೋತ್ರ ಅಲ್ಲೆಲೂಯ I ಮನವೇ, ವಂದಿಸು ಆತನನು ಅಲ್ಲೆಲೂಯ II

2ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು I ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು II

3ನಂಬಬೇಡ ಅಧಿಕಾರಿಯನು I ನೆಚ್ಚಬೇಡ ನರಮಾನವನನು I ಉದ್ಧರಿಸಲು ಅಸಮರ್ಥನವನು II

4ಉಸಿರುಹೋದುದೇ ಮರಳುತ್ತಾನವನು ಮಣ್ಣಿಗೆ I ಅಂದೇ ಅಳಿಯುತ್ತದೆ ಅವನೆಲ್ಲಾ ಯೋಜನೆ II

5ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು I ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು II

6ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ I ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ II

7ದೊರಕಿಸುವನು ನ್ಯಾಯ ದಲಿತರಿಗೆ I ಒದಗಿಸುವನು ಆಹಾರ ಹಸಿದವರಿಗೆ I ನೀಡುವನು ಬಿಡುಗಡೆ ಬಂಧಿತರಿಗೆ II

8ಕಣ್ಣನ್ನೀಯುವನು ಪ್ರಭು ಕುರುಡರಿಗೆ I ಉದ್ಧಾರಕನಾ ಪ್ರಭು ಕುಗ್ಗಿದವರಿಗೆ I ಆತನ ಒಲವಿರುವುದು ಸಾಧು ಸಜ್ಜನರಿಗೆ II

9ರಕ್ಷಿಸುವನು ಪ್ರಭು ಪರದೇಶಿಗಳನು I ಆದರಿಸುವನು ಅನಾಥರನು, ವಿಧವೆಯರನು I ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು II

10ಪ್ರಭುವೇ ಅರಸನು ಸದಾಕಾಲಕು I ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು I ಅಲ್ಲೆಲೂಯ! II