ಹಳೆಯ ಒಡಂಬಡಿಕೆKNCL

ಕೀರ್ತನೆಗಳು 145

1ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ I ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ II

2ಹೊಗಳುವೆನು ನಾ ದಿನದಿನವೂ ನಿನ್ನನು I ಭಜಿಸುವೆನೆಂದೆಂದಿಗೂ ನಿನ್ನ ಹೆಸರನು II

3ಪ್ರಭು ಮಹಾತ್ಮನು, ಸ್ತುತ್ಯರ್ಹನು I ಆತನ ಮಹಿಮೆ ಅಗಮ್ಯವಾದದು II

4ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು I ತಿಳಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು II

5ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು I ನಿನ್ನ ಮಹೋನ್ನತ ಮಹಿಮಾಪ್ರಭಾವವನು II

6ಜನರು ಸಾರುವರು ನಿನ್ನ ಅದ್ಭುತ ಶಕ್ತಿಯನು I ನಾ ಪ್ರಸಿದ್ಧಪಡಿಸುವೆನು ನಿನ್ನ ಮಹಿಮೆಯನು II

7ಪ್ರಕಟಿಸುವರವರು ನಿನ್ನ ಮಹೋಪಕಾರವನು I ಹಾಡಿ ಹೊಗಳುವರು ನಿನ್ನ ನ್ಯಾಯನೀತಿಯನು II

8ಪ್ರಭು ದಯಾನಿಧಿ, ಕೃಪಾಸಾಗರನು I ಸಹನಶೀಲನು, ಪ್ರೀತಿಪೂರ್ಣನು II

9ಪ್ರಭುವಿನ ಕರುಣೆ ಎಲ್ಲರ ಮೇಲೆ I ಆತನ ಕೃಪೆಯು ಸೃಷ್ಟಿಯ ಮೇಲೆ II

10ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I ಕೊಂಡಾಡುವುದು ನಿನ್ನನು ಭಕ್ತ ಸಮೂಹವು II

11ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II

12ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು I ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು II

13ಶಾಶ್ವತವಾದುದು ನಿನ್ನ ರಾಜ್ಯವು I ಇರುವುದೆಂದಿಗು ನಿನ್ನ ಆಳ್ವಿಕೆಯು II

14ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು I ನಡೆಯಲಿ ಆತನು ಸದಾ ಪ್ರೀತಿಮಯನು II

15ಎತ್ತುವನಾತ ಬಿದ್ದವರನೆಲ್ಲ I ಉದ್ಧರಿಪನು ಕುಗ್ಗಿದವರನೆಲ್ಲ II

16ಎಲ್ಲ ಜೀವಿಗಳ ಕಣ್ಣು ಪ್ರಭು, ನಾಟಿವೆ ನಿನ್ನ ಕಡೆಗೆ I ಕಾಲಕಾಲಕೆ ಕೊಡುವೆ ಆಹಾರವನು ಅವುಗಳಿಗೆ II

17ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು I ಎಲ್ಲರ ಕೋರಿಕೆಗಳನು ಈಡೇರಿಸುವವನು II

18ಪ್ರಭುವಿನ ಮಾರ್ಗ ಧರ್ಮಸಮ್ಮತ I ಆತನ ಕಾರ್ಯವೆಲ್ಲ ಪುನೀತ II

19ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ I ಯಥಾರ್ಥವಾಗಿ ಆತನನು ಅರಸುವವರಿಗೆ II

20ಹೆದರಿ ನಡೆಯುವವರ ಇಷ್ಟವನು ಈಡೇರಿಸುವನು I ಅವರ ಮೊರೆಯನು ಕೇಳಿ ಅವರನು ರಕ್ಷಿಸುವನು II

21ಸಲಹುವನು ತನ್ನನು ಪ್ರೀತಿಸುವವರೆಲ್ಲರನು I ನಾಶಮಾಡುವನು ದುರ್ಮಾರ್ಗಿಗಳೆಲ್ಲರನು II

22ಉಸುರುತಿದೆ ನನ್ನ ನಾಲಿಗೆ ಪ್ರಭುವಿನ ಸ್ತೋತ್ರವನು I ನರರೆಲ್ಲರು ಸ್ತುತಿಸಲಿ ಸತತ ಆತನ ಶ್ರೀನಾಮವನು II