ಹಳೆಯ ಒಡಂಬಡಿಕೆKNCL
1ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ I ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ II
2ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ I ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ II
3ಹೇ ಪ್ರಭೂ, ಮನುಜನು ಎಷ್ಟರವನು, ನೀನವನನು ಲಕ್ಷಿಸಲು I ನರಮಾನವನು ಏತರವನು, ನೀನವನನು ಪರಾಮರಿಸಲು II
4ಮಾನವನು ಕೇವಲ ಉಸಿರಿಗೆ ಸಮಾನ I ಮರೆಯಾಗುವ ನೆರಳು ಅವನ ಜೀವನ II
5ಆಕಾಶವನು ತಗ್ಗಿಸಿ ಬಾ ಪ್ರಭು ಇಳಿದು I ಬೆಟ್ಟಗಳನು ನೀ ಮುಟ್ಟಲು, ಹೊಗೆ ಹೊರಹೊಮ್ಮುವುದು II
6ಸಿಡಿಲಿನಿಂದ ಚೆದರಿಸಿಬಿಡು ಶತ್ರುಗಳನು I ನಿನ್ನಂಬುಗಳಿಂದ ಭ್ರಾಂತಗೊಳಿಸವರನು II
7ನನ್ನ ಸೆಳೆದುಕೊ ಮಹಾಜಲರಾಶಿಯಿಂದ I ನಿನ್ನ ಕೈಚಾಚಿ ಮೇಲಣಲೋಕದಿಂದ I ನನ್ನನು ಬಿಡಿಸು ಅನ್ಯಜನರ ಕೈಯಿಂದ II
8ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II
9ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು I ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು II
10ನೀನೇ ಅರಸುಗಳಿಗೆ ಜಯಪ್ರದನು I ದಾಸ ದಾವೀದನನು ಬಿಡಿಸಿದವನು II
11ಕ್ರೂರ ವೈರಿಗಳಿಂದೆನ್ನ ಬಿಡಿಸಯ್ಯಾ I ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II
12ನಮ್ಮ ಗಂಡು ಮಕ್ಕಳಿರಲಿ I ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ ಗಿಡಗಳಂತೆ II ನಮ್ಮ ಹೆಣ್ಣುಮಕ್ಕಳಿರಲಿ I ಅರಮನೆಯಲ್ಲಿ ಕೆತ್ತಿದ ಸುಂದರ ಮೂಲೆಗಂಬಗಳಂತೆ II
13ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ ಕಣಜಗಳು I ಈಯಲಿ ಸಾವಿರಾರು ಮರಿಗಳನು ನಮ್ಮ ಹೊಲದ ಕುರಿಗಳು II
14ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ I ಮೈಯಿಳಿಯದೆ, ಲೋಪವಿಲ್ಲದೆಯೆ ಗರ್ಭಧರಿಸಲಿ I ನಮ್ಮ ಬೀದಿಗಳಲಿ ಗೋಳಾಟ ಕೇಳಿಬರದಿರಲಿ II
15ಇಂತಹ ಸಮೃದ್ಧಿ ಪಡೆದಿರುವ ಜನರು ಭಾಗ್ಯವಂತರು I ಯಾರಿಗೆ ದೇವರು ಪ್ರಭುವಾಗಿಹನೋ ಅವರು ಧನ್ಯರು II