ಹಳೆಯ ಒಡಂಬಡಿಕೆKNCL

ಕೀರ್ತನೆಗಳು 140

1ಬಿಡಿಸೆನ್ನನು ಪ್ರಭು ಕೆಡುಕರಿಂದ I ಕಾಪಾಡೆನ್ನನು ಹಿಂಸಕರಿಂದ II

2ಕೇಡನು ಕಲ್ಪಿಸುತ್ತಾರವರು ಮನದೊಳು I ಕಲಹವೆಬ್ಬಿಸುತ್ತಾರೆ ಯಾವಾಗಲೂ II

3ಅವರ ನಾಲಗೆಯು ಸರ್ಪದಂತೆ I ಹಾವಿನ ವಿಷ ಅವರ ತುಟಿ ಹಿಂದೆ II

4ಪ್ರಭು, ತಪ್ಪಿಸೆನ್ನನು ದುಷ್ಟರ ಕೈಯಿಂದ I ಕಾಪಾಡಿ ರಕ್ಷಿಸೆನ್ನನು ಹಿಂಸಕರಿಂದ I ನಾನೆಡವುದನೇ ನಿರೀಕ್ಷಿಸುವವರಿಂದ II

5ಒಡ್ಡಿದರು ಗರ್ವಿಗಳು ಗುಪ್ತವಾಗಿ I ಉರುಲನು, ಪಾಶಗಳನು ನನಗಾಗಿ I ಬಲೆಹಾಸಿದರು ದಾರಿಗೆ ಅಡ್ಡವಾಗಿ II

6“ನೀನೆ ನನ್ನ ದೇವರು” ಎಂದೆ ಪ್ರಭುವಿಗೆ I ಕಿವಿಗೊಡೆಂದು ಕೇಳಿದೆ, ನನ್ನ ವಿಜ್ಞಾಪನೆಗೆ II

7ಸ್ವಾಮಿದೇವಾ, ನೀನೆನಗೆ ದುರ್ಗಸ್ಥಾನ I ರಣರಂಗದಲಿ ನೀನೆನಗೆ ಶಿರಸ್ತ್ರಾಣ II

8ನೆರವೇರಿಸಬೇಡ ದುರುಳರ ಕೋರಿಕೆಯನು I ಕೈಗೂಡಿಸಬೇಡ ಪ್ರಭು, ಅವರ ಕುಯುಕ್ತಿಯನು II

9ನನ್ನನ್ನು ಸುತ್ತುವರೆದಿರುವವರು ತಲೆಯೆತ್ತದಿರಲಿ I ಅವರಾಡುವ ಕೇಡು ಅವರ ತಲೆಯ ಮೇಲೇ ಎರಗಲಿ II

10ಸುರಿಯಲಿ ಆ ಜನರ ಮೇಲೆ ಉರಿಉರಿವ ಬೆಂಕಿಕೆಂಡ I ಅವರೇಳದಂತೆ ಸೇರಲಿ ಪಾತಾಳದ ಅಗ್ನಿಕುಂಡ II

11ಉಳಿಯದಿರಲಿ ನಾಡೊಳು ಚಾಡಿಕೋರರು I ಕೇಡಿಂದ ನಾಶವಾಗಲಿ ಹಿಂಸಕರು II

12ಪ್ರಭು ನೀ ದೀನದಲಿತರ ವಕೀಲನೆಂದು ನಾ ಬಲ್ಲೆ I ಬಡವರಿಗೆ ನ್ಯಾಯ ದೊರಕಿಸುವವ ನೀ ಅಲ್ಲವೆ? II

13ಭಜಿಸುವರು ಸಜ್ಜನರು ನಿನ್ನಾ ಸಿರಿನಾಮವನು I ಬಾಳ್ವರು ಸುಮನಸ್ಕರು ಬಿಡದೆ ನಿನ್ನ ಸನ್ನಿಧಿಯನು II