ಹಳೆಯ ಒಡಂಬಡಿಕೆKNCL

ಕೀರ್ತನೆಗಳು 137

1ಬಾಬಿಲೋನಿನ ನದಿಗಳ ತೀರದಲಿ ಕುಳಿತು I ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು II

2ಆ ನಾಡಿನಲಿ ಕಿನ್ನರಿಗಳನ್ನೆ ತೂಗುಹಾಕಿದೆವು I ನೀರವಂಜಿ ಮರಗಳಿಗೆ ಅವನ್ನು ನೇತುಹಾಕಿದೆವು II

3ಸೆರೆಹಿಡಿದು ಬಂಧಿಸಿದಾ ಜನ ಈ ಪರಿ ಪೀಡಿಸಿದರೆಮ್ಮನು: I “ಹಾಡಿ, ನಮ್ಮ ವಿನೋದಕ್ಕಾಗಿ ಸಿಯೋನಿನ ಗೀತೆಗಳಲೊಂದನು” II

4ಪ್ರಭುಗೀತೆಗಳ ನಾವು ಗಾನ ಮಾಡುವುದೆಂತು I ಅನ್ಯನಾಡಿನೊಳು ಅವುಗಳನು ಹಾಡುವುದೆಂತು II

5ಜೆರುಸಲೇಮ್, ನಾನು ನಿನ್ನ ಮರೆತಲ್ಲಿ I ನನ್ನ ಬಲಹಸ್ತ ಬತ್ತಿಹೋಗಿಬಿಡಲಿ II

6ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ I ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ I ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ II

7ನೆನೆಸಿಕೊ ಪ್ರಭು, ಜೆರುಸಲೇಮಿನ ನಾಶನದಿನ ಅವರಾಡಿದ್ದನು: I “ಕೆಡವಿ ನೆಲಕೆ, ಬುಡಸಹಿತ ಕೆಡವಿ” ಎಂದಾ ಅಧಮ ಎದೋಮ್ಯರನು II

8ಬಾಬಿಲೋನ್ ನಗರವೇ ಕೇಳು : ಅಳಿವು ಕಾದಿದೆ ನಿನಗೆ I ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ ತೀರಿಸುವವಗೆ I ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ II